DAKSHINA KANNADA
ಗ್ರಾಹಕರ ಸುಲಿಗೆಯಲ್ಲಿ ಮತ್ತೆ ನಿರತವಾದ ಕೇಬಲ್ ಮಾಫಿಯಾ, ಟ್ರಾಯ್ ನಿಯಮಕ್ಕೆ ಇಲ್ಲಿ ಬೆಲೆ ಇದೆಯಾ..
ಗ್ರಾಹಕರ ಸುಲಿಗೆಯಲ್ಲಿ ಮತ್ತೆ ನಿರತವಾದ ಕೇಬಲ್ ಮಾಫಿಯಾ, ಟ್ರಾಯ್ ನಿಯಮಕ್ಕೆ ಇಲ್ಲಿ ಬೆಲೆ ಇದೆಯಾ..
ಮಂಗಳೂರು, ಫೆಬ್ರವರಿ 20: ನಿಮ್ಮ ಆಯ್ಕೆ , ನಿಮ್ಮ ಹಕ್ಕು ಎನ್ನುವ ಸಿದ್ಧಾಂತದಡಿಯಲ್ಲಿ ಕೇಂದ್ರ ಸರಕಾರ ಕೇಬಲ್ ಟಿವಿ ಗ್ರಾಹಕರಿಗೆ ವಿಪುಲವಾದ ಅವಕಾಶವನ್ನು ನೀಡಿದೆ.
ನಿಮಗೆ ಯಾವ ಚಾನಲ್ ಬೇಕೋ ಅದನ್ನು ಮಾತ್ರ ಪಡೆಯುವ ಈ ಅವಕಾಶದಿಂದ ದಕ್ಷಿಣಕನ್ನಡ ಜಿಲ್ಲೆಯ ಜನ ಮಾತ್ರ ವಂಚಿತರಾಗಿದ್ದಾರೆ.
ಕಾರಣ ಕೇಂದ್ರ ಸರಕಾರದ ಈ ಮಹತ್ವಾಕಾಂಕ್ಷಿ ಯೋಜನೆಯ ದಾರಿ ತಪ್ಪಿಸುವ ಕಾರ್ಯದಲ್ಲಿ ಇಲ್ಲಿನ ಕೇಬಲ್ ಮಾಫಿಯಾಗಳು ನಿರತವಾಗಿದೆ.
ತಿಂಗಳಿಗೆ 130 ರೂಪಾಯಿ ಹಾಗೂ ಅದರ ಮೇಲೆ ಜಿಎಸ್ಟಿ ಸೇರಿಸಿ 152 ರೂಪಾಯಿಗಳಲ್ಲಿ ನೀವು ಪೇ ಚಾನಲ್ ಗಳ ಜೊತೆಗೆ ಒಟ್ಟು 100 ಚಾನಲ್ ಗಳನ್ನು ನೋಡುವ ಅವಕಾಶವಿದೆ.
ಆದರೆ ಕೇಬಲ್ ಅಪರೇಟರ್ ಗಳು ಈ ಮಾಹಿತಿಯನ್ನು ಗ್ರಾಹಕರಿಂದ ಸಂಪೂರ್ಣ ಮುಚ್ಚಿಟ್ಟಿದ್ದಾರೆ.
ಅಲ್ಲದೆ ಕೇಂದ್ರ ಸರಕಾರ ಕೇಬಲ್ ಟಿವಿ ಗ್ರಾಹಕರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ನೀಡಿದ ವೀಕ್ಷಣೆಯ ಅವಕಾಶವನ್ನು ಕೇಬಲ್ ಮಾಫಿಯಾಗಳು ದಿಕ್ಕು ತಪ್ಪಿಸುತ್ತಿವೆ.
ಪೇ ಚಾನಲ್ ಹೆಸರಿನಲ್ಲಿ ಮನೆಯೊಂದರಿಂದ 500 , 600 ರೂಪಾಯಿಗಳನ್ನು ಸುಲಿಗೆ ಮಾಡುತ್ತಿದೆ.
ಆದರೆ ಟ್ರಾಯ್ ನಿಯಮದ ಪ್ರಕಾರ 130 ರೂಪಾಯಿ ಹಾಗೂ ಜಿಎಸ್ಟಿ ಸೇರಿಸಿ 152 ರೂಪಾಯಿಗಳಿಗೆ 100 ಚಾನಲ್ ಗಳನ್ನು ಕೇಬಲ್ ಅಪರೇಟರ್ ಗಳು ಗ್ರಾಹಕನಿಗೆ ನೀಡಬೇಕು.
ಇದರಲ್ಲಿ ಗ್ರಾಹಕನಿಗೆ ಬೇಕಾದ ಪೇ ಚಾನಲ್ ಗಳನ್ನೂ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನೂ ನೀಡಲಾಗಿದೆ.
ಉದಾಹರಣೆಗೆ ನಿಮಗೆ ಉದಯ ಟಿವಿ, ಕಲರ್ಸ್ ಕನ್ನಡ, ಜೀ ಕನ್ನಡ ಹೀಗೆ 12 ಚಾನಲ್ ಗಳನ್ನು ನೀವು ಆಯ್ಕೆ ಮಾಡಿಕೊಂಡಿದ್ದೀರಿ ಎಂದಾದರೆ, ಇವೆಲ್ಲವೂ 130 ರ ಅಡಿಯಲ್ಲೇ ಬರುತ್ತದಲ್ಲದೆ, ಉಳಿದ 88 ಚಾನಲ್ ಗಳನ್ನೂ ಕೇಬಲ್ ಅಪರೇಟರ್ ಇದೇ ಹಣದಲ್ಲಿ ನೀಡಬೇಕಾಗುತ್ತದೆ.
ಆದರೆ ಇದೀಗ ಕೇಬಲ್ ಅಪರೇಟರ್ ಗಳು ನಿಮಗೆ ಇಷ್ಟವಿರುವ ಚಾನಲ್ ಬೇಕೆಂದಾದರೆ, ಆ ಚಾನಲ್ ಗಳ ಗೊಂಚಲನ್ನೇ ಪಡೆದುಕೊಳ್ಳಬೇಕು ಎನ್ನುವ ಸಲಹೆಯನ್ನೂ ನೀಡುವ ಮೂಲಕ ಮತ್ತೆ ಸುಲಿಗೆಯಲ್ಲಿ ತೊಡಗಿಕೊಂಡಿದ್ದಾರೆ.
ಆದರೆ ಟ್ರಾಯ್ ನಿಯಮದ ಪ್ರಕಾರ ಉದಾಹರಣೆಗೆ ಝೀ ಪ್ಯಾಕೇಜ್ ನಲ್ಲಿ ನಿಮಗೆ ಕೇವಲ ಝೀ ಕನ್ನಡ ಚಾನಲ್ ಮಾತ್ರ ಬೇಕಾದಲ್ಲಿ ಅದೊಂದನ್ನೇ ಪಡೆಯುವ ಅವಕಾಶವನ್ನೂ ಟ್ರಾಯ್ ನೀಡಿದೆ.
ಆದರೆ ಈ ಎಲ್ಲಾ ಮಾಹಿತಿಗಳನ್ನು ಕೇಬಲ್ ಅಪರೇಟರ್ ಗಳು ಗ್ರಾಹಕರಿಂದ ಮುಚ್ಚಿಟ್ಟಿದ್ದಾರೆ.
ಚಾನಲ್ ಗಳು ಬೇಕಾದಲ್ಲಿ ಪೇ ಚಾನಲ್ ಗಳ ಪ್ಯಾಕೇಜ್ ಹಾಕಿಸಿಕೊಳ್ಳಬೇಕು, ಅದರ ಮೇಲೆ ಮತ್ತೆ ಜಿಎಸ್ಟಿ ಹಾಗೂ ಮತ್ತೆ ಫ್ರೀ ಚಾನಲ್ ಗಳ 130 ರೂಪಾಯಿ ಹಾಗೂ ಅದರ ಮೇಲೆ ಮತ್ತೆ ಜಿಎಸ್ಟಿ ಪಾವತಿಸಬೇಕು ಎನ್ನುವ ಆದೇಶವನ್ನೂ ನೀಡಲಾರಂಭಿಸಿದ್ದಾರೆ.
ಅಲ್ಲದೆ ಚಾನಲ್ ಬೇಕಾದಲ್ಲಿ ತಮ್ಮ ಕಛೇರಿಗೆ ಬಂದು ಹಣ ಪಾವತಿಸುವಂತೆ ಗ್ರಾಹಕರನ್ನು ಸತಾಯಿಸಲಾರಂಭಿಸಿದ್ದಾರೆ.
ಕೇಬಲ್ ಟಿವಿ ಗ್ರಾಹಕರಿಗಾಗಿ ಕೇಂದ್ರ ಸರಕಾರ ಕಡಿಮೆ ವೆಚ್ಚದಲ್ಲಿ ವೀಕ್ಷಣೆಯ ಅವಕಾಶ ನೀಡಿದ್ದರೂ, ಈ ಅವಕಾಶವನ್ನು ತಪ್ಪಿಸುವ ನಿಟ್ಟಿನಲ್ಲಿ ಕೇಬಲ್ ಮಾಫಿಯಾ ಇದೀಗ ಕೇಂದ್ರ ಸರಕಾರದ ಮೇಲೆ ಗ್ರಾಹಕರು ಆಕ್ರೋಶ ಮೂಡುವಂತೆ ಮಾಡಲಾರಂಭಿಸಿದ್ದಾರೆ.
ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಈ ಬಗ್ಗೆ ಕೇಬಲ್ ಆಪರೇಟರ್ ಗಳಿಗೆ ಸೂಕ್ತ ನಿರ್ದೇಶನ ನೀಡಬೇಕಾಗಿದೆ.
ಇದನ್ನೂ ಓದಿ..
ಮಂಗಳೂರಿನಲ್ಲಿ ಕೇಬಲ್ ಟೀವಿ ಬಳಕೆದಾರರ ಹಿತವನ್ನು ಕಾಪಾಡಲು ಕೇಬಲ್ ಟಿವಿ ಬಳಕೆದಾರರ ಹಿತ ರಕ್ಷಣಾ ವೇದಿಕೆ ಅಸ್ಥಿತ್ವಕ್ಕೆ ಬರಲಿದ್ದು ಈಗಾಗಲೇ ಇದರ ರೂಪು ರೇಶೆಗಳು ಅಂತಿಮ ಹಂತದಲ್ಲಿದೆ. ಸಮಾಜ ವಿವಿಧ ಸ್ಥರಗಳಲ್ಲಿ ಕೆಲಸ ಮಾಡಿದ ಅನುಭವಿಗಳ ಮಾರ್ಗದರ್ಶನದಲ್ಲಿ ಮತ್ತು ಕಾನೂನು ತಜ್ಞರು ಇರುವ ಈ ವೇದಿಕೆಗೆ ಕೇಬಲ್ ಟಿವಿ ವೀಕ್ಷಕರು ತಮಗಾದ ಸಮಸ್ಯೆ, ಕೇಬಲ್ ಅಪರೇಟರುಗಳು ಗ್ರಾಹಕರು ನೀಡುವ ದೂರುಗಳಿಗೆ ಸ್ಪಂದಿಸದಿದ್ದರೆ, ಗುಣಮಟ್ಟದ ಸೇವೆ ನೀಡಲು ಹಿಂದೇಟು ಹಾಕಿದರೆ ಅವರ ವಿರುದ್ದ ದೂರುಗಳನ್ನು ಬಳಕೆದಾರರ ಹಿತ ರಕ್ಷಣಾ ವೇದಿಕೆಗೆ ನೇರವಾಗಿ ಅಥವಾ ಈ ಮೇಲ್ ಮೂಲಕ ಸಲ್ಲಿಸಲು ಅವಕಾಶವಿದೆ. ಪ್ರಥಮ ಹಂತವಾಗಿ ಮಂಗಳೂರು ನಗರ ವ್ಯಾಪ್ತಿಯ ಕೇಬಲ್ ಅಪರೇಟರುಗಳನ್ನು ಗುರುತ್ತಿಸಿ ಪ್ರತಿ ಕೇಬಲ್ ಅಪರೇಟರುಗಳ ವ್ಯಾಪ್ತಿಯಲ್ಲಿ ಕೇಬಲ್ ಬಳಕೆದಾರರ ಹಿತರಕ್ಷಣಾ ವೇದಿಕೆ ಸ್ಥಾಪನೆ ಮಾಡಲು ಚಿಂತನೆ ನಡೆಸಲಾಗಿದ್ದು, ಅವುಗಳ ಮೇಲ್ಉಸ್ತುವಾರಿಗೆ ಒಂದು ಉನ್ನತ ಮಟ್ಟದ ಸಮಿತಿ ಕಾರ್ಯ ನಿರ್ವಹಿಸಲು ಇತ್ತೀಚೆಗೆ ನಡೆದ ಸಮಾಲೋಚನ ಸಭೆಯಲ್ಲಿ ಚಿಂತನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಶೀಘ್ರವೇ ನೀಯೋಗ ಜಿಲ್ಲಾಧಿಕಾರಿ ಹಾಗೋ ಪೊಲೀಸ್ ವರಿಷ್ಟಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ. ಇದರಿಂದ ಕೇಬಲ್ ಮಾಫಿಯಾಕ್ಕೆ ಶಾಶ್ವತವಾಗಿ ಕಡಿವಾಣ ಹಾಕಲು ಸಾಧ್ಯ ಎಂಬ ಮಾತುಗಳು ಸಭೆಯಲ್ಲಿ ವ್ಯಕ್ತವಾಗಿದೆ.