LATEST NEWS
ಬೈರಂಪಳ್ಳಿ ಗ್ರಾಮಪಂಚಾಯತ್ ಸಿಬ್ಬಂದಿ ರಾಜೀನಾಮೆ ಪ್ರಕರಣ ಸುಖಾಂತ್ಯ
ಉಡುಪಿ ಜನವರಿ 03: ಹೊಸವರ್ಷದಂದೆ ಬಾಗಿಲು ಹಾಕಿ ಬಂದ್ ಆಗಿದ್ದ 23ನೇ ಬೈರಂಪಳ್ಳಿ ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳ ರಾಜೀನಾಮೆ ಪ್ರಕರಣ ಸುಖಾಂತ್ಯ ಕಂಡಿದ್ದು, ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಅವರು ಗುರುವಾರ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿದ್ದಾರೆ.
ಹೊಸವರ್ಷದಂದು ಸಿಬ್ಬಂದಿ ಇಲ್ಲದೆ 23ನೇ ಬೈರಂಪಳ್ಳಿ ಗ್ರಾಮ ಪಂಚಾಯಿತಿ ಬಂದ್ ಆಗಿತ್ತು. ಈ ಬಗ್ಗೆ ಸುದ್ದಿ ಪ್ರಸಾರವಾದ ಹಿನ್ನಲೆ ಸಂಬಂಧಪಟ್ಟವರು ಪಂಚಾಯಿತಿಗೆ ದೌಡಾಯಿಸಿ ಕಚೇರಿ ಬಾಗಿಲು ತೆರೆದಿದ್ದರು.
ಪಂಚಾಯಿತಿಯಲ್ಲಿ ಪಿಡಿಒ ಹಾಗೂ ಪಂಚಾಯಿತಿ ಸದಸ್ಯರಿಂದ ನೆಮ್ಮದಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿ ಸಿಬ್ಬಂದಿ ಸುಮನ, ವಸಂತಿ, ಮನೋಹರ್ ಎಂಬುವವರು ಡಿಸೆಂಬರ್ 19ರಂದು ರಾಜೀನಾಮೆ ನೀಡಿದ್ದರು.
ರಾಜೀನಾಮೆಯನ್ನು ಡಿಸೆಂಬರ್ 31ರ ಒಳಗಾಗಿ ಅಂಗೀಕಾರ ಮಾಡಬೇಕೆಂದು ಕೇಳಿಕೊಂಡಿದ್ದರು. ಪಂಚಾಯಿತಿ ಅಧ್ಯಕ್ಷರು ರಾಜೀನಾಮೆಯನ್ನು ಅಂಗೀಕಾರ ಮಾಡದೆ, ಅದನ್ನು ಇಒ ಹಾಗೂ ಸಿಇಒ ಅವರಿಗೆ ಡಿಸೆಂಬರ್ 20ರಂದು ಕಳುಹಿಸಿದ್ದರು. ಜನವರಿ 1ರಂದು ಮೂರು ಜನ ಕರ್ತವ್ಯಕ್ಕೆ ಹಾಜರಾಗದ ಕಾರಣ ಪಂಚಾಯಿತಿ ಕಚೇರಿ ಮಧ್ಯಾಹ್ನದ ತನಕ ಬಂದಾಗಿತ್ತು. ಮೇಲಧಿಕಾರಿಗಳ ಮಾತಿಗೆ ಒಪ್ಪಿ ರಾಜೀನಾಮೆ ಹಿಂಪಡೆದು ಕರ್ತವ್ಯಕ್ಕೆ ಹಾಜರಾಗಲು ಸಮ್ಮತಿಸಿದ್ದೇವೆ. ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾಗಬಾರದು. ಕೆಲಸವನ್ನು ನಾವು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದು ರಾಜೀನಾಮೆ ನೀಡಿದ್ದ ಸಿಬ್ಬಂದಿ ಮನೋಹರ್ ಹೇಳಿದರು.