Connect with us

LATEST NEWS

ಬೈಂದೂರು: ಕಾರು ಸುಟ್ಟು ಕೊಲೆಗೈದು ಹಂತಕರು, ಸಿನಿಮೀಯ ಶೈಲಿಯಲ್ಲಿ ನಡೆಯಿತು ಹತ್ಯೆ

ಬೈಂದೂರು, ಜುಲೈ 15: ಹೇನುಬೇರು ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಸುಟ್ಟುಹೋದ ಸ್ಥಿತಿಯಲ್ಲಿ ಕಾರು ಹಾಗೂ ಅದರೊಳಕ್ಕೆ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ಜಾಡು ಹಿಡಿದು ಹೊರಟ ಬೈಂದೂರು ಪೊಲೀಸರು, ಓರ್ವ ಮಹಿಳೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ. ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯ 4 ದಿನಗಳ ಪೊಲೀಸ್ಟ ಕಸ್ಟಡಿಗೆ ನೀಡಿದೆ.

ಸುಟ್ಟು ಕರಕಲಾದ ಕಾರು. ಕಾರಿನೊಳಗೆ ತಲೆಬುರುಡೆ ಎಲುಬು. ಪುಟ್ಟದಾದರೂ ಕ್ಲೂ ಸಿಗುತ್ತಾ ಅಂತ ಹುಡುಕಾಡುತ್ತರೋ ಪೊಲೀಸರು. ಇದು ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಹೇನಬೇರು ಎಂಬಲ್ಲಿ ಕಂಡುಬಂದ ದೃಶ್ಯ. ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದು ನಿನ್ನೆ ಬೆಳಕಿಗೆ ಬಂದಿದೆ. ಕಾರಿನಲ್ಲಿದ್ದ ಶವ ಸಂಪೂರ್ಣ ಸುಟ್ಟು ಕರಕಲಾಗಿದ್ದರಿಂದ ಅದು ಪುರುಷನದ್ದೇ ಅಥವಾ ಮಹಿಳೆಯ ಮೃತದೇಹವೇ ಎಂಬುದು ಗುರುತು ಸಿಕ್ಕಿರಲಿಲ್ಲ. ಕಾರಿನ ಚಾಸಿ ನಂಬರ್ ತೆಗೆದು ನೋಡಿದಾಗ ಇದು ಕಾರ್ಕಳದ ಮಾಳ ನಿವಾಸಿ ಸದಾನಂದ ಶೇರಿಗಾರ್ ಎಂಬವರ ಕಾರು ಎಂದು ಗೊತ್ತಾಗಿದೆ.

ತನಿಖೆಗಾಗಿ ಉಡುಪಿ ಎಸ್ಪಿ ವಿಷ್ಣುವರ್ಧನ್ ಪೊಲೀಸರ 2 ತಂಡಗಳನ್ನು ರಚಿಸಿದ್ರು. ಬೈಂದೂರು, ಕಾರ್ಕಳ ಪೊಲೀಸರು ಅಲರ್ಟ್ ಆಗಿ ತನಿಖೆ ಮಾಡಿದಾಗ ಸಾಸ್ತಾನ ಟೋಲ್‍ನಲ್ಲಿ ಸುಟ್ಟ ಕಾರು ಮಂಗಳವಾರ ರಾತ್ರಿ ಪಾಸ್ ಆಗಿದ್ದು, ಕಾರಿನಿಂದ ಮಹಿಳೆಯೊಬ್ಬಳು ಇಳಿದು ಟೋಲ್ ಹಣ ಕಟ್ಟಿದ್ದು ಗೊತ್ತಾಗಿದೆ. ಆಗ ಆ ಮಹಿಳೆಯನ್ನು ಕೊಲೆ ಮಾಡಲಾಗಿದೆ ಎಂದು ಸ್ಟೋರಿ ಟರ್ನ್ ಪಡೆದುಕೊಳ್ಳುತ್ತದೆ. ಆದರೆ ಪೊಲೀಸರ ತನಿಖೆಯಲ್ಲಿ ಸದಾನಂದ ಮತ್ತು ಶಿಲ್ಪಾ ಸತ್ತಿಲ್ಲ ಬದುಕಿದ್ದಾರೆ ಎಂದು ಗೊತ್ತಾಗುತ್ತದೆ. ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರಿಗೆ ಶಾಕ್ ಕಾದಿತ್ತು.

ಸದಾನಂದ ಪರವಾನಗಿ ಪಡೆದ ಸರ್ವೇಯರ್. ಕೆಲವು ದಿನಗಳ ಹಿಂದೆ ಭೂ ದಾಖಲೆಗಳನ್ನು ಫೋರ್ಜರಿ ಮಾಡಿದ್ದ. ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೋರ್ಟ್‍ನಲ್ಲಿ ಚಾರ್ಜ್‍ಶೀಟ್ ದಾಖಲಾಗಿತ್ತು. ವಿಚಾರಣೆ, ಕೊರ್ಟ್ ನೋಟಿಸ್. ಅರೆಸ್ಟ್ ವಾರೆಂಟ್ ಕೂಡ ಆಗಿತ್ತು. ಬಂಧನದ ಭೀತಿಯಲ್ಲಿದ್ದ ಸದಾನಂದ ಮತ್ತವನ ಗೆಳತಿ ಶಿಲ್ಪಾ ಖತರ್ನಾಕ್ ಪ್ಲಾನ್ ಮಾಡಿದ್ದಾರೆ. ತನ್ನ ವಯಸ್ಸಿನ ವ್ಯಕ್ತಿಯಾದ ಕಾರ್ಕಳದ ಆನಂದ ದೇವಾಡಿಗನನ್ನು ಆರಿಸಿದ್ದ ಸದಾನಂದ ಕಾರಿನಲ್ಲಿ ಕರೆದುಕೊಂಡು ಹೋಗಿದ್ದ. ನಿದ್ರೆ ಬರಿಸುವ ಮಾತ್ರೆ ಜೊತೆ ಮದ್ಯ ಕುಡಿಸಿ ಆನಂದ ದೇವಾಡಿಗನ ಸಹಿತವಾಗಿ ಕಾರನ್ನು ಸುಟ್ಟು ಹಾಕಿದ್ರು.

ನಂತರ ತಲೆಮರೆಸಿಕೊಳ್ಳುವ ಸಲುವಾಗಿ ಬೆಂಗಳೂರಿಗೆ ಬಸ್ಸಿನಲ್ಲಿ ಹೊರಟಿದ್ದ ಸದಾನಂದ ಹಾಗೂ ಶಿಲ್ಪ, ಬಸ್ ಹಾಳಾಗಿದ್ದರಿಂದ ಮತ್ತೆ ಮೂಡುಬಿದಿರೆಗೆ ವಾಪಾಸಾಗಿದ್ದಾರೆ. ಅಲ್ಲಿಂದ ಕಾರ್ಕಳಕ್ಕೆ ಬೆಳಿಗ್ಗೆ ಬಸ್ಸಿನಲ್ಲಿ ಬರುತ್ತಿದ್ದ ಸಂದರ್ಭ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಸಹಕರಿಸಿದ ಸದಾನಂದನ ಸಂಬಂಧಿಗಳಾದ ಇಬ್ಬರು ವ್ಯಕ್ತಿಗಳನ್ನೂ ಇದಕ್ಕೂ ಮೊದಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತನಿಖೆಯ ಜಾಡು ಹಿಡಿದು ಹೊರಟ ಬೈಂದೂರು ಪೊಲೀಸರು ಶೀಘ್ರವಾಗಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ತನಿಖೆ ಮುಂದುವರಿಸಿದ್ದಾರೆ. ಅವರಿಗೆ ಸಹಕರಿಸಿದ್ದರು ಎನ್ನಲಾದ ಇಬ್ಬರನ್ನು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಒಂದೇ ದಿನದಲ್ಲಿ ಪ್ರಕರಣ ಭೇದಿಸಿದ ಪೊಲೀಸರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *