DAKSHINA KANNADA
ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ :ಮಂಗಳೂರಲ್ಲಿ ಫೀಲ್ಡಿಗಿಳಿದ ಖಾಸಾಗಿ ಬಸ್ ಗಳು..!

ಮಂಗಳೂರು : ಕರ್ನಾಟಕ ರಾಜ್ಯ ಸರ್ಕಾರದ ವಿರುದ್ಧ ಮುನಿಸಿಕೊಂಡಿರುವ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮದ ನೌಕರರು ತಮ್ಮ ಬೇಡಿಕೆಗಳನ್ನು ಈ ಕೂಡಲೇ ಈಡೇರಿಸುವಂತೆ ಆಗ್ರಹಿಸಿ ಮುಷ್ಕರದ ಮಾರ್ಗ ಹಿಡಿದಿದ್ದಾರೆ.
ಪರಿಣಾಮವಾಗಿ ಕರಾವಳಿ ನಗರಿ ಮಂಗಳೂರು- ಉಡುಪಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಬೆಳಗ್ಗಿನಿಂದಲೇ ಕೆಎಸ್ಆರ್ಟಿಸಿ ಬಸ್ ಸಂಚಾರ ಸ್ತಬ್ಧವಾಗಿದೆ. ರಾಜಧಾನಿ ಬೆಂಗಳೂರಿನಲ್ಲೂ ಬಿಎಂಟಿಸಿ ಬಸ್ಗಳು ರಸ್ತೆಗಿಳಿಯದ ಕಾರಣ ದಿನನಿತ್ಯ ಕೆಲಸ ಕಾರ್ಯಗಳಿಗೆ ಬಸ್ಗಳನ್ನೇ ನೆಚ್ಚಿಕೊಂಡ ಜನ ಪರದಾಡುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲ ದೊರಕಿದ್ದು ಇಂದು ಮುಂಜಾನೆಯಿಂದಲೇ ಸರ್ಕಾರಿ ಬಸ್ ಗಳು ರಸ್ತೆಗಿಳಿಯದೇ ದೂರ ಉಳಿದಿವೆ.
ಸದಾ ಜನರಿಂದ ತುಳುಕುತ್ತಿದ್ದ ಮಂಗಳೂರಿನ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣ ಖಾಲಿಯಾಗಿತ್ತು. ಮುಷ್ಕರಕ್ಕೆ ಬೆಂಬಲ ನೀಡಿರುವ ಮಂಗಳೂರು ವಿಭಾಗದ ಚಾಲಕ ನಿರ್ವಾಹಕರು ಕರ್ತವ್ಯಕ್ಕೆ ಗೈರು ಹಾಜರಾಗಿದ್ದಾರೆ.
ಏಕಾಏಕಿ ಮುಷ್ಕರ ಕೈಗೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. ಮುಂಜಾಗ್ರತಾ ಕ್ರಮವಾಗಿ ಬಸ್ ನಿಲ್ದಾಣದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಾಡಿಸಲಾಗಿದೆ.
ಖಾಸಗಿ ಬಸ್ ಗಳ ಸೇವೆ ಬಳಕೆ : ಸರ್ಕಾರಿ ಬಸ್ ಚಾಲಕ ನಿರ್ವಾಹಕರು ಕರ್ತವ್ಯಕ್ಕೆ ಗೈರು ಹಾಜರಾದ ಪರಿಣಾಮ ಮಂಗಳೂರಿನಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದೊಳಗೆ ಜನರಿಗೆ ತೊಂದರೆಯಾಗದಂತೆ ಖಾಸಗಿ ಬಸ್ ಗಳ ವ್ಯವಸ್ಥೆಯಲ್ಲಿ ಜಿಲ್ಲಾಡಳಿತ ಮಾಡಿದೆ.
ಮೈಸೂರು, ಮಡಿಕೇರಿ, ಸುಬ್ರಹ್ಮಣ್ಯ ಧರ್ಮಸ್ಥಳ ಹೀಗೆ ವಿವಿಧ ಕಡೆ ತೆರಳಲು ಖಾಸಗಿ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಸಾರಿಗೆ ನೌಕರರು ಕರ್ತವ್ಯಕ್ಕೆ ಆಗಮಿಸದಿದ್ದರೆ ಮತ್ತಷ್ಟು ಖಾಸಗಿ ಬಸ್ ಬಳಸಲು ಸಿದ್ಧ ಎಂದು ಕೆ ಎಸ್ ಆರ್ ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ..