LATEST NEWS
ಭಾರತಕ್ಕೆ ಮಲ್ಯ ಗಡಿಪಾರಿಗೆ ಬ್ರಿಟನ್ ಸಮ್ಮತಿ

ಭಾರತಕ್ಕೆ ಮಲ್ಯ ಗಡಿಪಾರಿಗೆ ಬ್ರಿಟನ್ ಸಮ್ಮತಿ
ನವದೆಹಲಿ, ಫೆಬ್ರವರಿ 05 : ಸ್ಥಗಿತಗೊಂಡಿರುವ ಕಿಂಗ್‌ಫಿಷರ್ ಏರ್‌ಲೈನ್ಸ್ ಬ್ಯಾಂಕುಗಳಿಂದ ಪಡೆದ ಸುಮಾರು 9 ಸಾವಿರ ಕೋಟಿ ಬಾಕಿ ಉಳಿಸಿ, ರಾತೋರಾತ್ರಿ ಲಂಡನಿಗೆ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಲು ಬ್ರಿಟನ್ನಿನ ಗೃಹ ಕಾರ್ಯದರ್ಶಿ ಆದೇಶಿಸಿದ್ದಾರೆ. ಗೃಹ ಕಾರ್ಯದರ್ಶಿ ಸಾಜಿದ್ ಸಾವಿದ್ ಈ ಆದೇಶ ನೀಡಿದ್ದಾರೆ. ವಿಜಯ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಸಂಬಂಧ ಬ್ರಿಟನ್ ನ್ಯಾಯಾಲಯದಲ್ಲಿ ನಡೆದ ಕಾನೂನು ಹೋರಾಟದಲ್ಲಿ ಮಲ್ಯರಿಗೆ ಕಳೆದ ಡಿಸೆಂಬರ್‌ನಲ್ಲಿ ಸೋಲಾಗಿತ್ತು. ಹಸ್ತಾಂತರ ಆದೇಶ ಹೊರಡಿಸುವ ಅಧಿಕಾರ ಇರುವುದು ಗೃಹ ಕಾರ್ಯದರ್ಶಿಗೆ ಮಾತ್ರ ಹಾಗಾಗಿ ಮುಖ್ಯ ಮ್ಯಾಜಿಸ್ಟ್ರೇಟ್ ತೀರ್ಪನ್ನು ಗೃಹ ಕಾರ್ಯದರ್ಶಿಗೆ ಕಳುಹಿಸಲಾಗಿತ್ತು. ಮಲ್ಯ ವಿರುದ್ಧ ವಂಚನೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣಗಳಿವೆ ಎಂದು ಭಾರತ ಸರ್ಕಾರ ವಾದ ಕೂಡ ಮಂಡಿಸಿತ್ತು. ಹಾಗಾಗಿ, 2017ರ ಏಪ್ರಿಲ್‌ನಲ್ಲಿ ಸ್ಕಾಟ್ಲೆಂಡ್ ಯಾರ್ಡ್, ಮಲ್ಯ ವಿರುದ್ಧ ಹಸ್ತಾಂತರ ವಾರಂಟ್ ಹೊರಡಿಸಿತ್ತು. ಅದಕ್ಕೆ ಮಲ್ಯ ಜಾಮೀನು ಪಡೆದುಕೊಂಡಿದ್ದರು. ಭಾರತದ ಜೈಲುಗಳು ಸರಿ ಇಲ್ಲ ಎಂದು ಮಲ್ಯ ಅವರು ಹಸ್ತಾಂತರವನ್ನು ವಿರೋಧಿಸಲು ಕಾರಣಕೊಟ್ಟಿದ್ದರು. ಆದರೆ, ಮುಂಬೈನ ಜೈಲಿನ ದೃಶ್ಯಗಳನ್ನು ಚಿತ್ರೀಕರಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು ಮತ್ತು ಮಲ್ಯ ಅವರ ಇತರ ಆಕ್ಷೇಪಗಳಿಗೂ ಸರ್ಕಾರ ಉತ್ತರ ನೀಡಿತ್ತು. ಈ ಎಲ್ಲವೂ ತೃಪ್ತಿಕರವಾಗಿವೆ ಎಂದು ನ್ಯಾಯಾಲಯ ಹೇಳಿದ್ದು, ಇದೀಗ ಕನೆಗೂ ಮಲ್ಯ ಭಾರತಕ್ಕೆ ಹಸ್ತಾಂತರಗೊಳ್ಳಲಿದ್ದಾರೆ.