LATEST NEWS
ದಕ್ಷಿಣಕನ್ನಡದಲ್ಲಿ ಬಂದ್ ಆದ 10 ಸೇತುವೆಗಳು – ಮುಂದೆ ದೋಣಿಯೇ ಗತಿ….?
ಮಂಗಳೂರು ಅಗಸ್ಟ್ 20: ಮುಂಗಾರು ಮಳೆ ಈ ಬಾರಿ ದೇಶದ ರೈತರ ಮೊಗದಲ್ಲಿ ಸಂತಸ ತರುತ್ತೆ ಅಂದುಕೊಂಡಿದ್ದು ಇದೀಗ ನಿರಾಸೆಯ್ನಂಟು ಮಾಡಿದೆ. ಯಾವುದೇ ಚಂಡಮಾರುತಗಳ ತೊಂದರೆ ಇಲ್ಲದೆ ಸುರಿದ ಮಳೆ, ಕೇರಳದಲ್ಲಿದೊಡ್ಡ ಅನಾಹುತವನ್ನೇ ಸೃಷ್ಟಿಸಿದೆ. ಕರ್ನಾಟಕದಲ್ಲೂ ಮಳೆ ಅಬ್ಬರ ಜೊರಾಗಿಯೆ ಇದ್ದು, ಶಿರೂರು ದುರಂತ ಮಳೆ ಹೇಗಿತ್ತು ಅನ್ನೊದಕ್ಕೆ ಇನ್ನೊಂದು ಉದಾಹರಣೆ ಆಗಿದೆ. ಈ ಬಾರಿ ಮಳೆ ದಕ್ಷಿಣಕನ್ನಡದಲ್ಲೂ ಅತೀ ಹೆಚ್ಚು ಹಾನಿ ಉಂಟುಮಾಡಿದೆ. ಅಲ್ಲದೆ ಅತೀ ಹೆಚ್ಚು ಗುಡ್ಡ ಕುಸಿತದ ಘಟನೆಗಳು ನಡೆದಿದೆ. ಮಳೆಯ ಬೆನ್ನಲ್ಲೇ ಇನ್ನೊಂದು ಸಮಸ್ಯೆ ಇದೀಗ ಶುರುವಾಗಿದ್ದು, ಬಿಹಾರದಲ್ಲಿ ಸರಣಿಯಾಗಿ ಬೀಳುತ್ತಿರುವ ಸೇತುವೆಗಳ ನಡುವೆ ಕರ್ನಾಟಕದಲ್ಲೂ ಸಂಕಷ್ಟ ಎದುರಾಗಿದೆ. ಕಾರವಾರದ ಕಾಳಿ ಸೇತುವೆ ಮುರಿದು ಜಿಲ್ಲೆಯಲ್ಲೂ ಆತಂಕ ಸೃಷ್ಟಿಯಾಗಿತ್ತು. ಈ ಮಧ್ಯೆ ತಂತ್ರಜ್ಞರ ವರದಿ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ 10 ಸೇತುವೆಗಳಲ್ಲಿ ಸಂಚಾರ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಇದರಿಂದ ಪರ್ಯಾಯ ರಸ್ತೆಗಾಗಿ ವಾಹನ ಸವಾರರು ಪರದಾಡುವಂತಾಗಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನಿರ್ದೇಶನದಂತೆ ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು 15 ದಿನಗಳಿಂದೀಚೆಗೆ ಜಿಲ್ಲಾದ್ಯಂತ ಸೇತುವೆಗಳ ಪರಿಶೀಲನೆ ನಡೆಸಿ ವರದಿ ನೀಡಿದ್ದಾರೆ. ಇದರಲ್ಲಿ ಕೆಲವೊಂದು ಸೇತುವೆಗಳನ್ನು ಅಪಾಯಕಾರಿ ಎಂದು ಗುರುತಿಸಲಾಗಿದ್ದು, ಅವುಗಳಲ್ಲಿ ಸಂಚಾರ ಸಂಪೂರ್ಣ ನಿಷೇಧ ಅಥವಾ ಘನ ವಾಹನ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಕೂಳೂರು ಸೇತುವೆಯಲ್ಲಿ ಆಗಸ್ಟ್ 19 ರಿಂದ ಬಸ್‌ಗಳನ್ನು ಹೊರತುಪಡಿಸಿ ಘನ ವಾಹನ ಸಂಚಾರ ನಿಷೇಧಿಸಲಾಗಿದೆ. ಮಂಗಳೂರು ತಾಲೂಕಿನ ಸುರತ್ಕಲ್ ಕಬಕ ರಾಜ್ಯ ಹೆದ್ದಾರಿಯ ಅಡ್ಡೂರು ಸೇತುವೆ ಶಿಥಿಲಗೊಂಡಿದ್ದು, ಘನವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಮಂಗಳೂರು ತಾಲೂಕಿನ ಪರಾರಿ- ಉಳಾಯಿಬೆಟ್ಟು- ಮಲ್ಲೂರು ಜಿಲ್ಲಾ ಮುಖ್ಯ ರಸ್ತೆಯ 0.95 ಕಿ.ಮೀ ರಲ್ಲಿ ಸೇತುವೆ ದುಸ್ಥಿತಿಯಲ್ಲಿದ್ದು, ಘನ ವಾಹನಗಳ ಸಂಚಾರ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ದೇರಳಕಟ್ಟೆ ಬರುವ ಜಿಲ್ಲಾ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿರುವುದರಿಂದ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ದಾಮಸ್‌ಕಟ್ಟೆ – ಬಳ್ಳುಂಜೆ ಜಿಲ್ಲಾ ಮುಖ್ಯ ರಸ್ತೆಯ ಪಲಿಮಾರ್ ಗ್ರಾಮದ ಸಮುದ್ರದ ಹಿನ್ನೀರಿನ ಪ್ರದೇಶದ ಸೇತುವೆ ದುಸ್ಥಿತಿಯಲ್ಲಿದ್ದು, ಈ ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧಿಸಲಾಗಿದೆ.
ಪುತ್ತೂರು-ಪಾಣಾಜೆ ರಸ್ತೆಯ ದೇವಸ್ಯದಿಂದ ಚೆನ್ನ ಮೂಲಕ ಸಂರ್ಪಕ ಕಲ್ಪಿಸುವ ಸೇತುವೆಯು ಎರಡು ದಿನಗಳಿಂದ ಸುರಿದ ಭಾರಿ ಮಳೆ ನೀರಿನಿಂದ ಸಂಪೂರ್ಣ ಮುಳುಗಡೆಯಾಗಿರುವುದರಿಂದ ಮುಂದಿನ ಆದೇಶದವರೆಗೆ ಈ ಸೇತುವೆಯಲ್ಲಿ ಘನ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ ರಾಜ್ಯ ಹೆದ್ದಾರಿ-276ರ ಪೈಚಾರುವಿನಿಂದ-ಮುಂಡಾಜೆ-ದಿಡುಪೆಗೆ ತೆರಳುವ ಸೇತುವೆಗಳಲ್ಲಿವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಪುತ್ತೂರು ತಾಲೂಕಿನ ಜಿಲ್ಲಾ ಮುಖ್ಯ ರಸ್ತೆ ಕಿ.ಮೀ 13.60 ರ ಕರ್ನೂರು ಕೋಟಿಗದ್ದೆ ಎಂಬಲ್ಲಿ ಹಳೇ ಸೇತುವೆ ಶಿಥಿಲಗೊಂಡ ಕಾರಣ ವಾಹನ ಸಂಚಾರ ನಿಷೇಧಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ ನಿಡಿಗಲ್ ಮೂಲಕ ನಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುರಿಪಳ್ಳಕ್ಕೆ ಸಂಪರ್ಕ ಕಲ್ಪಿಸುವ ಉಜಿರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಜಿರೆ-ಇಂದಬೆಟ್ಟು, ಜಿಲ್ಲಾ ಮುಖ್ಯ ರಸ್ತೆಯ ಅಂಬಡಬೆಟ್ಟು ಸೇತುವೆ ಶಿಥಿಲಾವಸ್ಥೆಯಲ್ಲಿದೆ. ಈ ಕಾರಣದಿಂದ ಸೇತುವೆಯಲ್ಲಿಘನ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಪರ್ಯಾಯವಾಗಿ ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ದ್ವಾರದಿಂದ- ಸುರ್ಯ ದೇವಸ್ಥಾನ ಮಾರ್ಗವಾಗಿ- ಕೇಳ್ತಾಜೆ ಮುಖಾಂತರ ಸಂಚರಿಸುವುದು.
ಶಿಥಿಲಗೊಂಡು ಅಪಾಯಕಾರಿ ಸ್ಥಿತಿಯಲ್ಲಿರುವ ಸೇತುವೆಗಳನ್ನು ಗುರುತಿಸಿರುವ ಜಿಲ್ಲಾಡಳಿತ ಇಂತಹ 10 ಸೇತುವೆಗಳಲ್ಲಿ ವಾಹನ ಸಂಚಾರವನ್ನು ನಿಷೇಧಿಸಿದೆ. ಸೇತುವೆಗಳ ಮೇಲೆ ವಾಹನ ಸಂಚರಿಸದಂತೆ ತಡೆದ ಜಿಲ್ಲಾಡಳಿತ ಪರ್ಯಾಯ ರಸ್ತೆಗಳ ಸ್ಥಿತಿ ಬಗ್ಗೆ ಯೋಚನೆ ಮಾಡಿದ ಹಾಗೆ ಕಾಣುತ್ತಿಲ್ಲ. ಈಗಾಗಲೇ ನಿರ್ಬಂಧ ಹೇರಿರುವ ಸೇತುವೆಗಳ ದುರಸ್ಥಿ ಕಾರ್ಯದ ಬಗ್ಗೆ ಇಲ್ಲಿಯವರೆಗೆ ಜಿಲ್ಲಾಡಳಿತ ಯಾವುದೇ ಮಾಹಿತಿಯನ್ನು ನೀಡಿಲ್ಲ. ಈ ನಿರ್ಬಂಧ ಇನ್ನು ಎಷ್ಟು ದಿನ ಮುಂದುವರೆಯುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
You must be logged in to post a comment Login