LATEST NEWS
ಬ್ರಾಹ್ಮಣ ಹೆಣ ಸುಡುವುದಕ್ಕೂ ಗತಿಯಿಲ್ಲದಾಯಿತೇ ಹೋ ಶಿವನೇ..?

ಬಂಧುಗಳಿದ್ದರೂ ಅನಾಥವಾದ ಶವಕ್ಕೆ ಮುಸ್ಲಿಂ ವ್ಯಕ್ತಿಯ ಸಂಸ್ಕಾರ !
ಮಂಗಳೂರು, ಜುಲೈ 24 : ಕಾಲ ಹಾಳಾಗಿದೆ ಅಂತಾರೆ. ಕೆಲವರು ಕಾಲ ಹಾಳಾಗಿಲ್ಲ, ಜನ ಹಾಳಾಗಿದ್ದಾರೆ ಅಂತಾರೆ. ಹೌದು.. ಲೋಕೋ ಭಿನ್ನ ರುಚಿ.. ತಮಗನಿಸಿದಂತೆ ಹೇಳೋದು, ಮಾಡೋದನ್ನು ಜನ ಈಗ ರೂಢಿಸಿಕೊಂಡಿದ್ದಾರೆ. ಹಣ, ಆಸ್ತಿ ಇದ್ದರಷ್ಟೇ ಬಂಧು ಬಳಗ. ಏನೂ ಇಲ್ಲದಿದ್ದರೆ ನಾಯಿ ತಿಂದು ಹೋದರೂ ಮೂಸಿ ನೋಡದ ಈ ದೇಹ.. ಇಂಥ ಮಾತುಗಳನ್ನು ಹಲವು ಕಡೆ ಕೇಳಿರಬಹುದು. ಆದರೆ, ಇಂಥ ಮಾತುಗಳಿಗೆ ಜ್ವಲಂತ ನಿದರ್ಶನವೊಂದು ಮಂಗಳೂರಿನ ಮುಲ್ಕಿಯಲ್ಲಿ ನಡೆದಿದೆ.
ಬಂಧು ಬಳಗ ಎಲ್ಲ ಇದ್ದರೂ, ಆ ಹಿರಿಯ ಜೀವ ಕೊನೆ ಉಸಿರು ಬಿಟ್ಟಾಗ ಯಾರೂ ಇರಲಿಲ್ಲ. ಕಳೆದ ಎರಡು ವರ್ಷಗಳಿಂದ ಅನಾಥಾಶ್ರಮದಲ್ಲಿದ್ದ ವ್ಯಕ್ತಿ ತೀರಿಕೊಂಡ ಸುದ್ದಿ ಹೇಳಿದ್ದಕ್ಕೆ ಉಡುಪಿಯಲ್ಲಿ ಅರ್ಚಕನಾಗಿರುವ ಸೋದರನೊಬ್ಬ, ನೀನು ಈ ಸುದ್ದಿ ಹೇಳಿ ನನ್ನ ವ್ರತ ಕೆಡಿಸಿದೆಯಲ್ಲಾ ಅಂತಾ ಹೇಳಿದರಂತೆ..! ಈ ಘಟನೆ ನಡೆದಿದ್ದು ನಮ್ಮ ಸಮಾಜದಲ್ಲಿ ಸುಸಂಸ್ಕೃತರು ಎಂದು ಪರಿಗಣಿಸುವ ಬ್ರಾಹ್ಮಣ ಕುಟುಂಬದಲ್ಲಿ !

ಪಡುಬಿದ್ರಿಯ ವೇಣುಗೋಪಾಲ ರಾವ್ ಮೂಲತಃ ಸಿಎ ಪದವೀಧರರು. ಕೆಲವು ವರ್ಷಗಳ ಕಾಲ ತಮಿಳ್ನಾಡಿನಲ್ಲಿ ಇದ್ದು ಸಿಎ ಮಾಡಿದ್ದ ವೇಣುಗೋಪಾಲ ರಾವ್, ತನಗೆ ಇಷ್ಟು ಕಲಿತರೂ ಸೂಕ್ತ ಕೆಲಸ ಸಿಗಲಿಲ್ಲ ಎಂದು ನೊಂದು ಊರಿಗೆ ಮರಳಿದ್ದರು. ಆನಂತರ ಮನೆಯಲ್ಲಿ ತಾಯಿ ಜೊತೆಗೆ ಜೀವನದ ಬಂಡಿ ನೂಕುತ್ತಾ ಇದ್ದರು. ಆದರೆ, ಮನೆಯಲ್ಲೇ ಇದ್ದ ಭಟ್ಟರಿಗೆ ಕೆಲಸ ಸಿಗದ ನೋವಿನ ಮಧ್ಯೆ ಖಿನ್ನತೆ ಆವರಿಸಿತ್ತು. ಕೊನೆ ಕೊನೆಗೆ ಮಾನಸಿಕ ಸ್ಥಿಮಿತ ಕಳಕೊಂಡ ವೇಣುಗೋಪಾಲರನ್ನು ತಾಯಿಯೇ ನೋಡಿಕೊಂಡಿದ್ದರು. ಆದರೆ ಆರು ವರ್ಷಗಳ ಹಿಂದೆ ತಾಯಿ ವಯೋಸಹಜ ಕಾಯಿಲೆಯಿಂದ ತೀರಿಕೊಂಡರು. ಇದ್ದ ಮನೆಯಲ್ಲಿ ತಿನ್ನಲು ಗತಿಯಿಲ್ಲದ ಸಂದರ್ಭ ಬಂಧು ಬಳಗವೂ ಕೈಬಿಟ್ಟಿತ್ತು. ಇದರಿಂದಾಗಿ ಬೀದಿಗೆ ಬಿದ್ದ ವೇಣುಗೋಪಾಲ ರಾವ್, ಪಡುಬಿದ್ರಿಯ ಮಹಾಲಿಂಗೇಶ್ವರ ದೇವಸ್ಥಾನದ ಹೊರಭಾಗದಲ್ಲಿ ಮಲಗಲು ಆರಂಭಿಸಿದ್ದರು. ಸಿಕ್ಕ ಸಿಕ್ಕವರಲ್ಲಿ ಬೇಡುತ್ತಾ ಸಿಕ್ಕಿದ್ದನ್ನು ತಿನ್ನುತ್ತಾ ಕಾಲ ಕಳೆಯುತ್ತಿದ್ದ ಭಟ್ಟರು ದೇವಸ್ಥಾನದ ಎದುರಲ್ಲೇ ಹೇಸಿಗೆ ಮಾಡುತ್ತಿದ್ದರಂತೆ. ಇದರಿಂದ ಬೇಸತ್ತ ದೇವಸ್ಥಾನ ಕಮಿಟಿಯವರು, ಪಡುಬಿದ್ರಿಯಲ್ಲಿ ಸಾಮಾಜಿಕ ಕಾರ್ಯ ಮಾಡುತ್ತಿದ್ದ ಸಾಯಿಬ್ರಿಗೆ ಕರೆ ಮಾಡಿದ್ದರು ! ಇವರನ್ನೊಂದು ನಿಮ್ಮ ಅನಾಥಾಶ್ರಮಕ್ಕೆ ಒಯ್ಯಿರಿ ಅಂತಾ ಸಲಹೆ ಮಾಡಿದ್ರಂತೆ !
ಆಪತ್ಬಾಂಧವ ಹೆಸರಲ್ಲಿ ಆಂಬುಲೆನ್ಸ್ ಇಟ್ಟುಕೊಂಡು ಮಾನಸಿಕ ಅಸ್ವಸ್ಥರನ್ನು ಆರೈಕೆ ಮಾಡುತ್ತಿದ್ದ ಮೊಹಮ್ಮದ್ ಆಸಿಫ್, ಕೊನೆಗೆ ವೇಣುಗೋಪಾಲರನ್ನು ಎತ್ತಿಕೊಂಡು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸೇರಿಸಿದರು. ಮಲಗಿದಲ್ಲೇ ಇದ್ದು ಅನಾರೋಗ್ಯಕ್ಕೀಡಾಗಿದ್ದ ವ್ಯಕ್ತಿ ಒಂದಷ್ಟು ಸುಧಾರಣೆಯಾದ ಬಳಿಕ ಆಸಿಫರು, ತನ್ನದೇ ಅನಾಥಾಶ್ರಮಕ್ಕೆ ಸೇರಿಸಿದ್ದರು. ಮುಲ್ಕಿಯ ಕಾರ್ನಾಡಿನಲ್ಲಿರುವ ಅನಾಥಾಶ್ರಮದಲ್ಲಿ ಎರಡು ವರ್ಷಗಳಿಂದ ಇದ್ದ ವೇಣುಗೋಪಾಲ ರಾವ್ ಉಷಾರಾಗಿದ್ದರು. ತನ್ನವರನ್ನು ನೋಡುವ ಬಯಕೆಯನ್ನೂ ವ್ಯಕ್ತಪಡಿಸಿದ್ದರು. ಅದರಂತೆ ಬಂಧುಗಳಿಗೆ ಫೋನ್ ಮಾಡಿದರೆ, ಯಾರೂ ಇವರನ್ನು ನೋಡಲು ಬಂದಿರಲಿಲ್ಲ. ಹೀಗಿದ್ದ ವೇಣುಗೋಪಾಲ ರಾವ್, ಜುಲೈ 23ರಂದು ಬೆಳಗ್ಗೆ ತೀರಿಕೊಂಡಿದ್ದರು. ಬಂಧು ಬಳಗ ಎಲ್ಲರೂ ಇರುವುದನ್ನು ತಿಳಿದಿದ್ದ ಆಸಿಫ್, ಸೋದರರಿಗೆ ಫೋನ್ ಮಾಡಿದ್ರು. ಆದರೆ, ಉಡುಪಿಯಲ್ಲಿದ್ದ ಸೋದರನೊಬ್ಬನ ಪ್ರತಿಕ್ರಿಯೆಯೇ ಉಡಾಫೆಯದ್ದಾಗಿತ್ತು ಅಂತಾರೆ ಆಸಿಫ್. ನಮಗೂ ಅವನಿಗೂ ಯಾವುದೇ ಸಂಬಂಧ ಇಲ್ಲ. ಅವನನ್ನು ಬಿಟ್ಟು ತುಂಬ ವರ್ಷಗಳಾದವು. ಈಗ ತೀರಿಹೋದ ಸುದ್ದಿ ಹೇಳಿ ನನ್ನ ವ್ರತವನ್ನು ಭಂಗ ಮಾಡಿದೆ. ತೀರಿಹೋದ್ರೆ ಹೋಗಲಿ. ಏನು ಬೇಕಾದರೂ ಮಾಡಿಕೋ ಅಂತ ಫೋನ್ ಇಟ್ಟರಂತೆ..!
ವೇಣುಗೋಪಾಲ ರಾವ್ ತಾಯಿಗೆ ಐವರು ಮಕ್ಕಳು. ಮೂವರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಮಕ್ಕಳು. ಹೆಣ್ಮಕ್ಕಳಿಗೆ ಫೋನ್ ಮಾಡಿದರೆ, ಫೋನಲ್ಲೇ ಗೋಗರೆದರು ಅಂತಾರೆ ಆಸಿಫ್. ನೀವು ನಮ್ಮ ಅಣ್ಣನಂತೆ. ನೀವೇ ಒಂದು ಬೆಂಕಿ ಕೊಟ್ಟು ಬೂದಿ ಮಾಡಿ ಅಂತಾ ಹೇಳಿದ್ದರು. ಅವರ ಗಂಡಂದಿರೂ ಅದನ್ನೇ ಹೇಳಿದ್ರು. ನಾವು ಬೆಂಗಳೂರಿನಲ್ಲಿದ್ದು ಈಗ ಬರಲು ಆಗಲ್ಲ ಎಂದುಬಿಟ್ಟರು. ಒಬ್ಬ ಸಂಬಂಧಿಕರಂತೂ ನಾನು ಹತ್ತು ಸಾವಿರ ಕೊಡ್ತೀನಿ. ನೀವೇ ಎಲ್ಲವನ್ನೂ ಮಾಡಿ ಅಂತಾ ಹೇಳಿ ಹಣ ಕೈಗಿತ್ತು ಹೋದರಂತೆ.
ಕೊನೆಗೆ, ಮೊಹಮ್ಮದ್ ಆಸಿಫ್ ಮುಲ್ಕಿ ಪೊಲೀಸ್ ಠಾಣೆಯವರ ಪರ್ಮಿಷನ್ ಪಡೆದು ಮುಲ್ಕಿಯ ಸಾರ್ವಜನಿಕ ಹಿಂದು ರುದ್ರಭೂಮಿಯಲ್ಲಿ ವೇಣುಗೋಪಾಲ ರಾವ್ ಅವರನ್ನು ಹಿಂದು ವಿಧಿಗಳ ಪ್ರಕಾರವೇ ಅಂತ್ಯಸಂಸ್ಕಾರ ನಡೆಸಿದ್ರು. ತನ್ನ ಆಶ್ರಮದಲ್ಲಿದ್ದ ಹಿರಿಯರೊಬ್ಬರ ಸಲಹೆ ಪಡೆದು, ಸ್ನೇಹಿತರೊಂದಿಗೆ ಸೇರಿ ಶವವನ್ನು ಅರಿಶಿಣದ ನೀರಿನಲ್ಲಿ ಸ್ನಾನ ಮಾಡಿಸಿ, ಹೂಗಳನ್ನು ಇಟ್ಟು ಕಟ್ಟಿಗೆ ತರಿಸಿ ಶವ ಸಂಸ್ಕಾರ ನಡೆಸಿದ್ರು. ಬಂಧು ಬಳಗ ಎಲ್ಲವೂ ಇದ್ದ ಬ್ರಾಹ್ಮಣ ವ್ಯಕ್ತಿಯ ಚಿತೆಗೆ ಮುಸ್ಲಿಂ ಒಬ್ಬರು ಬೆಂಕಿ ಇಟ್ಟು ಸುಡುವಂತಾಯ್ತು. ಕೊನೆಗೆ ಶವ ಸುಟ್ಟ ಬಳಿಕ ಆಸಿಫ್ ಗೆ ಕರೆ ಮಾಡಿದ ಸೋದರಿಯೊಬ್ಬರು ಅವರ ಅಸ್ಥಿಯನ್ನೊಂದು ಸಮುದ್ರಕ್ಕೆ ಹಾಕಿಬಿಡಿ, ಮೋಕ್ಷ ಸಿಗಲಿ. ನಮಗೆ ನವರಾತ್ರಿ ಅಲ್ಲದೆ ಸದ್ಯಕ್ಕೆ ಬರಲಾಗುವುದಿಲ್ಲ ಎಂದರಂತೆ..!
ಮೊಹಮ್ಮದ್ ಆಸಿಫ್ ಅವರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಬಂಧು ಬಳಗದ ಕತೆ ಏನೇ ಇರಲಿ, ಹಿಂದು ಸಂಘಟನೆಗಳು, ಸಂಘ ಪರಿವಾರದ ಗಟ್ಟಿ ಹಿಡಿತ ಇರುವ ದಕ್ಷಿಣ ಕನ್ನಡದಲ್ಲಿ ಬ್ರಾಹ್ಮಣ ವ್ಯಕ್ತಿಯನ್ನು ಸುಡುವುದಕ್ಕೂ ಈ ದುರ್ಗತಿ ಬಂದಿದ್ದು ನಿಜಕ್ಕೂ ದುರಂತ ಎನ್ನಬೇಕಷ್ಟೆ.