LATEST NEWS
ಬ್ರಹ್ಮಾವರ – ರಸ್ತೆ ಅಪಘಾತದಲ್ಲಿ ಶಾಲಾ ವಿಧ್ಯಾರ್ಥಿ ಸಾವು – ರಸ್ತೆ ಅವ್ಯವಸ್ಥೆ ವಿರೋಧಿಸಿ ಸಾರ್ವಜನಿಕರಿಂದ ಬೃಹತ್ ಪ್ರತಿಭಟನೆ

ಉಡುಪಿ ಎಪ್ರಿಲ್ 2: ರಸ್ತೆ ದಾಟುತ್ತಿರುವ ವೇಳೆ ಕಾರು ಡಿಕ್ಕಿಯಾಗಿ ಶಾಲಾ ವಿಧ್ಯಾರ್ಥಿಯೊಬ್ಬ ಸಾವನಪ್ಪಿದ ಘಟನೆಗೆ ಸಂಬಂಧಿಸಿದಂತೆ ಸಮರ್ಪಕ ಸರ್ವಿಸ್ ರಸ್ತೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಇಂದು ಬ್ರಹ್ಮಾವರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಬ್ರಹ್ಮಾವರದ ಮಹೇಶ್ ಆಸ್ಪತ್ರೆ ಎದುರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿನ್ನೆ ಬೆಳಗ್ಗೆ ಶಾಲೆಗೆ ಹೋಗ ಲೆಂದು ರಸ್ತೆ ದಾಟಲು ನಿಂತಿದ್ದ ಸ್ಥಳೀಯ ಎಸ್‌ಎಂಎಸ್ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿ ವಂಶ್ ಶೆಟ್ಟಿ (11)ಗೆ ಕಾರು ಢಿಕ್ಕಿ ಹೊಡೆದು ಮೃತಪಟ್ಟಿದ್ದ, ಈ ಘಟನೆಯಿಂದ ಸಿಡಿದೆದ್ದ ಬ್ರಹ್ಮಾವರದ ಸಾರ್ವಜನಿಕರು, ವಿವಿಧ ಸಂಘಟನೆಗಳು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಇಂದು ಪ್ರತಿಭಟನಾ ಮೆರವಣಿಗೆ ಹಾಗೂ ತಾಲೂಕು ಕಚೇರಿ ಎದುರು ಬೃಹತ್ ಪ್ರತಿಭಟನಾ ಸಭೆ ನಡೆಸಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಕ್ಷಣವೇ ನಮಗೆ ಮಹೇಶ್ ಆಸ್ಪತ್ರೆಯಿಂದ ಎಸ್‌ಎಂಎಸ್ ಜೂನಿಯರ್ ಕಾಲೇಜುವರೆಗೆ (ದೂಪದಕಟ್ಟೆಯವರೆಗೆ) ಸಮರ್ಪಕವಾದ ಸರ್ವಿಸ್ ರಸ್ತೆಯನ್ನು ಕೂಡಲೇ ನಿರ್ಮಿಸಿಕೊಡಬೇಕು. ಬ್ರಹ್ಮಾವರ ಬಸ್ ನಿಲ್ದಾಣ, ಆಕಾಶವಾಣಿ ಸರ್ಕಲ್ ಹಾಗೂ ಮಹೇಶ್ ಆಸ್ಪತ್ರೆ ಎದುರಿನ ಭಾಗದಲ್ಲಿ ವಾಹನಗಳ ಸಂಚಾರ, ಜನರ ಸಂಚಾರ ದು:ಸ್ವಪ್ನವಾಗಿದ್ದು, ಇಲ್ಲಿ ಸುಗಮ ಸಂಚಾರಕ್ಕಾಗಿ ಫ್ಲೈ ಓವರ್ ನಿರ್ಮಾಣ ಮಾಡಲೇಬೇಕು ಎಂಬುದು ತಮ್ಮ ಬೇಡಿಕೆಯಾಗಿದೆ ಎಂದು ಪ್ರತಿಭಟನಕಾರರು ಹೇಳಿದರು.

ಎಪ್ರಿಲ್ 12ರೊಳಗೆ ಸರ್ವಿಸ್ ರಸ್ತೆ ನಿರ್ಮಾಣದ ಕುರಿತಂತೆ ಸ್ಪಷ್ಟ ಭರವಸೆ ಸಿಕ್ಕಿ, ಕಾಮಗಾರಿ ಪ್ರಾರಂಭ ಗೊಳ್ಳದಿದ್ದರೆ, ಎ.12ರಂದು ಬ್ರಹ್ಮಾವರ ಬಂದ್‌ಗೆ ಕರೆ ನೀಡಿ, ಉಗ್ರ ಪ್ರತಿಭಟನಾ ಹೋರಾಟ ನಡೆಸಲಾ ಗುವುದು ಎಂದು ಅವರು ರಾ.ಹೆದ್ದಾರಿ ಅಧಿಕಾರಿಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.