UDUPI
ಮೀನಿನ ಬಲೆ ಎತ್ತಲು ಹೋಗಿ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವು…!!

ಉಡುಪಿ ಜುಲೈ 3: ರಾತ್ರಿ ಮೀನು ಹಿಡಿಯಲು ಹಾಕಿದ ಬಲೆ ತೆಗೆಯಲು ಹೋಗಿ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬ್ರಹ್ಮಾವರದ ಬಾರ್ಕೂರಿನ ಹಾಲೆಕೊಡಿ ನದಿಯಲ್ಲಿ ನಡೆದಿದೆ. ಮೃತರನ್ನು ಬಾರ್ಕೂರು ಹೊಸಾಳ ಗ್ರಾಮದ ಹರ್ಷ (25) ಮತ್ತು ಕಾರ್ತಿಕ್ (21) ಎಂದು ಗುರುತಿಸಲಾಗಿದೆ.
ಈ ಯುವಕರಿಬ್ಬರು ಬಾರ್ಕೂರು ಸಂತೆ ಮಾರುಕಟ್ಟೆ ಸಮೀಪ ಹಾಲೆಕೊಡಿ ನದಿಯಲ್ಲಿ ನಿನ್ನೆ ರಾತ್ರಿ ಮೀನು ಹಿಡಿಯಲು ಬಲೆ ಕಟ್ಟಿ ಬಂದಿದ್ದರು. ಇಂದು ಬೆಳಿಗ್ಗೆ ಬಲೆ ಎಳೆಯಲು ಹೋದ ಸಂದರ್ಭ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇವರು ಬಲೆ ಕಟ್ಟಿದ ಪ್ರದೇಶದ ತುಂಬಾ ಆಳವಿದ್ದು, ಹಾಗಾಗಿ ಮೇಲೆಳಲಾಗದೇ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.

ತಕ್ಷಣ ಸುದ್ಧಿ ತಿಳಿದ ಸ್ಥಳೀಯರು, ಮೀನುಗಾರರು ಸ್ಥಳಕ್ಕೆ ಧಾವಿಸಿದ್ದು, ಬ್ರಹ್ಮಾವರ ಠಾಣಾ ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿಗಳು ಹಾಗೂ ಸ್ಥಳೀಯರ ಸಹಕಾರದಿಂದ ಇಬ್ಬರ ಶವವನ್ನು ಮೇಲೆತ್ತಲಾಗಿದೆ. ಮೃತ ಹರ್ಷ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಕಾರ್ತಿಕ್ ಕೊನೆಯ ವರ್ಷದ ಬಿಕಾಂ ವಿದ್ಯಾರ್ಥಿಯಾಗಿದ್ದ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.