Connect with us

  UDUPI

  ಬಿಪಿಎಲ್ ಕಾರ್ಡ್ ಗಳನ್ನು ಶೀಘ್ರದಲ್ಲಿ ವಿತರಿಸಿ- ಪ್ರಮೋದ್

  ಉಡುಪಿ, ಸೆಪ್ಟಂಬರ್ 7: ಆನ್‍ಲೈನ್ ಮೂಲಕ ಬಿಪಿಎಲ್ ಕಾರ್ಡ್‍ಗಳಿಗೆ ಅರ್ಜಿ ಸಲ್ಲಿಸಿರುವ ಕುಟುಂಬಗಳಿಗೆ ಸೆಪ್ಟಂಬರ್ ಅಂತ್ಯದ ಒಳಗೆ ಕಾರ್ಡ್ ಗಳನ್ನು ವಿತರಿಸುವಂತೆ ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಸೂಚಿಸಿದ್ದಾರೆ.

  ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲೆಯ ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ವಿವಿದೆಡೆಗಳಲ್ಲಿ ನಡೆಸಿದ ಜನಸಂಪರ್ಕ ಸಭೆಗಳಲ್ಲಿ ಮಾಹಿತಿ ನೀಡಿದ ಪರಿಣಾಮ 3428 ಕುಟುಂಬಗಳು ಬಿಪಿಎಲ್ ಕಾರ್ಡ್ ಗಳಿಗೆ ಮೊದಲ ಹಂತದಲ್ಲಿ ಅರ್ಜಿ ಸಲ್ಲಿಸಿದ್ದಾರೆ, ಈ ಕುಟುಂಬಗಳಿಗೆ ಸಂಬಂಧಿಸಿದ ಎಲ್ಲಾ ದಾಖಲಾತಿ ಪರಿಶೀಲನೆ ಮುಂತಾದ ಪ್ರಕ್ರಿಯೆಗಳನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸಿ, ಸಿಬ್ಬಂದಿ ಕೊರತೆಯಿದ್ದಲ್ಲಿ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗನ್ನು ನಿಯೋಜಿಸಿ ಸೆಪ್ಟಂಬರ್ ಅಂತ್ಯದ ವೇಳೆಗೆ ಅವರಿಗೆ ಬಿಪಿಎಲ್ ಸೌಲಭ್ಯ ದೊರೆಯುವಂತೆ ಕ್ರಮ ಕೈಗೊಳ್ಳಿ ಎಂದು ಜಿಲ್ಲೆಯ ಎಲ್ಲಾ ತಾಲೂಕುಗಳ ತಹಸೀಲ್ದಾರ್ ಗಳಿಗೆ ಸಚಿವರು ಸೂಚಿಸಿದರು.

  94 ಸಿ ಯಲ್ಲಿ ಇದುವರೆಗೂ 27877 ಅರ್ಜಿಗಳನ್ನು ಸ್ವೀಕರಿಸಿದ್ದು, 3324 ಮಂದಿಗೆ ಮಾತ್ರ ಹಕ್ಕುಪತ್ರಗಳನ್ನು ನೀಡಿದೆ, ವಿವಿಧ ಹಂತದಲ್ಲಿ ಬಾಕಿ ಇರುವ ಅರ್ಜಿಗಳನ್ನು ಶೀಘ್ರದಲ್ಲಿ ಇತ್ಯರ್ಥ ಪಡಿಸಿ ಎಂದ ಸಚಿವರು, 94 ಸಿಸಿಯಲ್ಲಿ 7797 ಅರ್ಜಿ ಸ್ವೀಕರಿಸಿ ಕೇವಲ 149 ಮಂದಿಗೆ ಮಾತ್ರ ಹಕ್ಕು ಪತ್ರ ನೀಡಿದೆ, ವಿವಿಧ ಹಂತದಲ್ಲಿ ಬಾಕಿ ಇರುವ ಅರ್ಜಿಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಗೊಳಿಸಿ ಹಾಗೂ ಅರ್ಜಿಗಳನ್ನು ತಿರಸ್ಕರಿಸುವ ಸಮಯದಲ್ಲಿ ಮತ್ತೊಮ್ಮೆ ಪರಿಶೀಲನೆ ನಡೆಸಿ, ಅರ್ಜಿದಾರರಿಗೆ ಸೂಕ್ತ ಕಾರಣ ನೀಡಿ ಎಂದು ತಹಸೀಲ್ದಾರ್ ಗಳಿಗೆ ಸೂಚಿಸಿದರು.

  ಜಿಲ್ಲೆಯಲ್ಲಿರುವ ಡಿಸಿ ಮನ್ನಾ ಜಾಗವನ್ನು ಗುರುತಿಸಿ, ತಾಲೂಕುವಾರು ಸಮಿತಿ ರಚಿಸಿ ಅರ್ಹರಿಗೆ ಜಮೀನು ಮಂಜೂರು ಮಾಡುವಂತೆ ಹಾಗೂ ಭೂ ನ್ಯಾಯ ಮಂಡಳಿಗಳಲ್ಲಿರುವ ಅರ್ಜಿಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡುವಂತೆ ಸೂಚಿಸಿದರು.
  ನವೆಂಬರ್ ಅಂತ್ಯದ ವೇಳೆಗೆ ಜಿಲ್ಲೆಯಲ್ಲಿ ಕಾಮಗಾರಿ ಕೈಗೊಂಡಿರುವ ಎಲ್ಲಾ ಕಾಂಕ್ರೀಟ್ ರಸ್ತೆಗಳ ಕಾಮಗಾರಿಯನ್ನು ಮುಗಿಸುವಂತೆ ಹಾಗೂ ಡಿಸೆಂಬರ್ ಒಳಗೆ ಎಲ್ಲಾ ರಸ್ತೆಗಳ ಫೇವರ್ ಫಿನಿಷ್ ಕಾಮಗಾರಿ ಮುಗಿಸುವಂತೆ ಇಂಜಿನಿಯರ್ ಗಳಿಗೆ ಸೂಚಿಸಿದ ಸಚಿವರು, ಪ್ರಸ್ತುತ ಮಳೆಯಿಂದ ಗುಂಡಿ ಬಿದ್ದಿರುವ ರಸ್ತೆಗಳ ಸಂಪೂರ್ಣ ವರದಿಯನ್ನು ನೀಡುವಂತೆ ಸೂಚಿಸಿದರು.

  ಜಿಲ್ಲೆಗೆ ವಿವಿಧ ವಸತಿ ಯೋಜನೆಗಳಿಗೆ ಸಂಬಂಧಪಟ್ಟಂತೆ ನಿಗದಿಪಡಿಸಿದ ಗುರಿ ಸಾಧಿಸುವಂತೆ ಹಾಗೂ ಪ.ಜಾತಿ, ಪಂಗಡದ ಕಾಲೋನಿಗಳಲ್ಲಿ ಮನೆಯಿಲ್ಲದೇ ವಾಸಿಸುತ್ತಿರುವ ಕುಟುಂಬಗಳ ಮಾಹಿತಿಯನ್ನು ಸಲ್ಲಿಸುವಂತೆ ಸೂಚಿಸಿದರು. ಮಲ್ಪೆ-ಪರ್ಕಳ-ಹಿರಿಯಡ್ಕ- ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ನಿರ್ವಹಣೆ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಅಸಮರ್ಪಕ ನಿರ್ವಹಣೆ ಕುರಿತು ವರದಿ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದರು.

  ದೀನ್ ದಯಾಳ್ ಯೋಜನೆಯಡಿ 4652 ಅರ್ಜಿಗಳು ಬಂದಿದ್ದು, ವಿದ್ಯುತ್ ಸೌಲಭ್ಯ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ, ವಿದ್ಯುತ್ ಗೆ ಸಂಬಂದಪಟ್ಟ ದೂರುಗಳಿದ್ದಲ್ಲಿ 1912 ಉಚಿತ ಸಹಾಯವಾಣಿ ಕೇಂದ್ರಕ್ಕೆ ದೂರು ಸಲ್ಲಿಸಬಹುದು ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿ.ಪಂ. ಸಿಇಓ ಶಿವಾನಂದ ಕಾಪಶಿ,ಕುಂದಾಪುರ ಉಪ ವಿಭಾಗಾಧಿಕಾರಿ ಶಿಲ್ಪಾ ನಾಗ್, ಅಪರ ಜಿಲ್ಲಾಧಿಕಾರಿ ಅನುರಾಧ ಹಾಗೂ ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

  Share Information
  Advertisement
  Click to comment

  You must be logged in to post a comment Login

  Leave a Reply