Connect with us

    UDUPI

    ಉತ್ತಮ ಮಾದರಿಗಳು ಜಿಲ್ಲೆಯಿಂದ ಬರಲಿ- ವಿಜಯಭಾಸ್ಕರ್

    ಉಡುಪಿ, ಸೆಪ್ಟಂಬರ್ 6: ಮುಂದುವರಿದ ಜಿಲ್ಲೆ ಉಡುಪಿಯಿಂದ ಅತ್ಯುತ್ತಮ ಅಭಿವೃದ್ಧಿ ಮಾದರಿಗಳ ನಿರೀಕ್ಷೆ ಇದೆ ಎಂದು ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಸಿ ವಿಜಯಭಾಸ್ಕರ್ ಅವರು ಹೇಳಿದರು.
    ಅವರು ಸೆಪ್ಟೆಂಬರ್ 5ರಂದು ದಿನಪೂರ್ತಿ ಉಡುಪಿ, ಕುಂದಾಪುರಗಳಲ್ಲಿ ಸಂಚರಿಸಿ, ಸ್ವಚ್ಛ ಉಡುಪಿ ಮಿಷನ್, ಕುಂದಾಪುರ ತಾಲೂಕು ಆಸ್ಪತ್ರೆ, ಕುಂಭಾಷಿ ಮಕ್ಕಳ ಮನೆ, ಅಂಗನವಾಡಿ, ಕಾರ್ವಾಡಿ ರೈತರನ್ನು ಭೇಟಿ ಮಾಡಿ ಮಾತನಾಡಿಸಿದರು. ಜಿಲ್ಲೆಯಲ್ಲಿ ಯೋಜನೆ ಅನುಷ್ಠಾನದ ಬಗ್ಗೆ ಸ್ಥಳಪರಿಶೀಲನೆ ನಡೆಸಿದರು. ಸಂಜೆ ಜಿಲ್ಲಾ ಪಂಚಾಯತ್‍ನ ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ಸಭೆಯನ್ನು ನಡೆಸಿದರು.

    ಜಿಲ್ಲೆ ಶಿಕ್ಷಣದಲ್ಲಿ ಮುಂದಿದೆ

    ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಎಲ್ಲ ಮಕ್ಕಳ ತೇರ್ಗಡೆ ಸಂಸ್ಥೆಯ ಗುರಿಯಾಗಿರದೆ ಡಿಸ್ಟಿಂಕ್ಷನ್ ಮಾರ್ಕ್‍ನೊಂದಿಗೆ ತೇರ್ಗಡೆ ಗುರಿಯಾಗಬೇಕು; ಬಿಸಿಎಮ್ ಹಾಸ್ಟೆಲ್ ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‍ಗಳಲ್ಲೂ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಪಾಸಾಗುವ ಗುರಿ ನಿಗದಿ ಉಡುಪಿ ಜಿಲ್ಲೆಯಲ್ಲಿ ಆಗಬೇಕೆಂದು ಅಧಿಕಾರಿಗಳಿಗೆ ಹೇಳಿದರು.
    ಐಟಿಡಿಪಿಯ ಸಾಧನೆಗಳ ಬಗ್ಗೆ ಮಾಹಿತಿ ಪಡೆದ ಅವರು, ವಿದ್ಯಾಸಿರಿ ಹಾಗೂ ಸ್ಕಾಲರ್‍ಷಿಪ್ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ದೊರಕುವುದನ್ನು ಖಾತರಿಪಡಿಸಿಕೊಳ್ಳಿ ಎಂದರು. ವಾರಾಹಿ ಯೋಜನೆಯ ಬಗ್ಗೆಯೂ ಮಾಹಿತಿ ಪಡೆದರು.
    ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಅಲ್ಲಿಗೆ ತೆರಳಿ ಆಸ್ಪತ್ರೆಯನ್ನು ಶುಚಿಮಾಡಿಸಿ, ಹಾಸಿಗೆಗೆ ಹೊಸ ಬೆಡ್‍ಶೀಟ್‍ಗಳನ್ನು ಹಾಕಿಸಿ, ಬೆಡ್‍ಗಳಿಗೆ ರೆಕ್ಸಿನ್ ಹಾಕಿಸಿ ಫೋಟೋವನ್ನು ತಮಗೆ ನಾಳೆಯೇ ಕಳುಹಿಸಬೇಕೆಂದು ವಿಜಯಭಾಸ್ಕರ್ ಸೂಚಿಸಿದರು.
    ಆಸ್ಪತ್ರೆಗಳಲ್ಲಿ ಆರೋಗ್ಯ ರಕ್ಷಾ ಸಮಿತಿ ಸಕ್ರಿಯವಾಗಿದೆಯೇ ಎಂದ ಅವರು, ಇಂತಹ ಸಮಿತಿಗಳಿಗೆ ಕಾಲಕಾಲಕ್ಕೆ ಸೂಕ್ತ ತರಬೇತಿ ನೀಡಬೇಕು. ಸಮಿತಿಯ ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಹೇಳಿದರು.
    ಕುಂಭಾಷಿ ಮಕ್ಕಳ ಮನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಜಿಲ್ಲೆಯ ಸರಕಾರಿ ಶಾಲೆಗಳು ಮತ್ತು ಅಂಗನವಾಡಿಗಳ ಅಭಿವೃದ್ಧಿಗೆ ಸಹಕಾರಿ ಇಲಾಖೆ ಜಿಲ್ಲೆಯಲ್ಲಿ ಔನತ್ಯದಲ್ಲಿರುವ ಸಹಕಾರಿ ಬ್ಯಾಂಕ್‍ಗಳು ನೆರವನ್ನು ಪಡೆಯಬೇಕು; ಈ ನಿಟ್ಟಿನಲ್ಲಿ ಉಪನಿಬಂಧಕರು ಕಾರ್ಯೋನ್ಮುಖರಾಗಬೇಕೆಂದರು.
    ಕೃಷಿ ಬೀಳು ಭೂಮಿಯಲ್ಲಿ ಕೃಷಿ ಅರಣ್ಯೀಕರಣ ನಡೆಸಲು ಸಾಮಾಜಿಕ ಅರಣ್ಯ ಇಲಾಖೆಯವರು ಮುಂದಾಗಬೇಕು ಎಂದ ಅವರು, ಜಿಲ್ಲೆಯಲ್ಲಿ 14,000 ಹೆಕ್ಟೆರ್ ನಷ್ಟಿರುವ ಬೀಳುಭೂಮಿಯಲ್ಲಿ ಕನಿಷ್ಟ ಎರಡು ಸಾವಿರ ಹೆಕ್ಟೆರ್ ಭೂಮಿಯಲ್ಲಿ ಕೃಷಿ ಅರಣ್ಯೀಕರಣ ನಡೆಸಿ. ರೈತರ ಮನವೊಲಿಸಿ ಸರ್ಕಾರ ಅರಣ್ಯೀಕರಣಕ್ಕೆ ನೀಡುವ ನೆರವಿನ ಜೊತೆ ಮೂರು ವರ್ಷಗಳ ಬಳಿಕ ತಂತಾನೆ ಬೆಳೆಯುವ ತೇಗದ ಗಿಡಗಳಿಂದ ರೈತರಿಗೆ ಆದಾಯ ದೊರೆಯಲಿದೆ ಎಂದರು.
    ಕೃಷಿ ಇಲಾಖೆಯು ಕೃಷಿಕರ ಜೊತೆ ಇನ್ನಷ್ಟು ನಿಕಟಸಂಪರ್ಕವನ್ನಿರಿಸಿಕೊಂಡು ಉತ್ತಮ ಭತ್ತದ ತಳಿ, ಶೇಂಗಾ ಬೀಜ ನೀಡುವಂತಾಗಬೇಕು; ಯಾಂತ್ರೀಕೃತ ಕೃಷಿಗೆ ಒತ್ತು ನೀಡಬೇಕು; ಬೀಜ ವಿತರಣೆಗೂ ಸಹಕಾರಿ ಇಲಾಖೆ ಸೊಸೈಟಿಗಳ ಮೂಲಕ ನೆರವಾಗಬೇಕು ಎಂದು ಸಭೆಯಲ್ಲಿ ಹೇಳಿದರು.
    ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆ ಪ್ರತೀ ವರ್ಷ ಹೆಚ್ಚಾಗುತ್ತಿದ್ದು, ರೈತ ಉತ್ಪಾದಕ ಸಂಘಗಳನ್ನು ಹೆಚ್ಚು ಮಾಡಬೇಕು; ಬೀದರ್ ಜಿಲ್ಲೆಯಲ್ಲಿ ಈ ನಿಟ್ಟಿನಲ್ಲಿ ಉತ್ತಮ ಕೆಲಸವಾಗಿದ್ದು, ಅಲ್ಲಿನ ಮಾದರಿಯನ್ನು ಅನುಸರಿಸಲು ತೋಟಗಾರಿಕಾ ಉಪನಿರ್ದೇಶಕರಿಗೆ ಹೇಳಿದರು.
    ಪಶುಭಾಗ್ಯ ಅನುಷ್ಠಾನ, ಹಾಲಿನ ಉತ್ಪಾದನೆ, ಮೀನುಗಾರಿಕೆ, ಜೇನುಸಾಕಾಣಿಕೆಯ ಬಗ್ಗೆಯೂ ಮಾಹಿತಿ ಪಡೆದುಕೊಂಡ ಅವರು, ಸಹಕಾರಿ ಇಲಾಖೆ ಕಿಸಾನ್ ಕ್ರೆಡಿಟ್ ಕಾರ್ಡ್‍ಗಳನ್ನು ಎಲ್ಲ ರೈತರಿಗೆ ನೀಡಲು ಕ್ರಮಕೈಗೊಳ್ಳಿ ಎಂದರು.
    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾತೃಪೂರ್ಣ ಯೋಜನೆ ಜಾರಿಗೆ ಸಜ್ಜಾಗಿ ಎಂದು ಸೂಚಿಸಿದ ಅವರು, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ವಸತಿ ಯೋಜನೆ ಗುರಿ ಸಾಧಿಸಿ ಎಂದರು.
    ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ನವಯುಗ್ ಕಂಪೆನಿಗಳ ಕಾಮಗಾರಿ ವಿಳಂಬವನ್ನು ಜಿಲ್ಲಾಧಿಕಾರಿಗಳು ಅಭಿವೃದ್ಧಿ ಆಯುಕ್ತರ ಗಮನಕ್ಕೆ ತಂದರಲ್ಲದೆ ಅವರು ಜಿಲ್ಲಾಡಳಿತದ ಸೂಚನೆಗಳನ್ನು ನಿರ್ಲಕ್ಷ್ಯ ಮಾಡುವುದಾಗಿ ಆರೋಪಿಸಿದರು.
    ಈ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳುವ ಭರವಸೆಯನ್ನು ವಿಜಯಭಾಸ್ಕರ ನೀಡಿದರು. ಪ್ರವಾಸೋದ್ಯಮ ಅಭಿವೃದ್ಧಿಗೆ ಕೆಲವು ಸಲಹೆಗಳನ್ನು ನೀಡಿದರಲ್ಲದೆ, ಸಣ್ಣ ನೀರಾವರಿ ಇಲಾಖೆ ಕಾಮಗಾರಿ ಬಗ್ಗೆ ಪರಿಶೀಲನೆ ನಡೆಸಿದರು. ಮೆಸ್ಕಾಂ ಪ್ರತಿ ಮಂಗಳವಾರ ನಿರ್ವಹಣೆಗೋಸ್ಕರ ಪವರ್‍ಕಟ್ ಮಾಡುತ್ತಿರುವುದು ವಿಚಿತ್ರ ಕ್ರಮ ಎಂದರು.
    ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಉಪಸ್ಥಿತರಿದ್ದರು. ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply