LATEST NEWS
ಚೀನಾ ವಿರುದ್ಧ ಭಾರತೀಯರ ಹೊಸ ಅಸ್ತ್ರ ಚೀನಾ ವಸ್ತು ಕೊಳ್ಳದಿರಲು ಶಪಥ !

ಚೀನಾ ವಿರುದ್ಧ ಭಾರತೀಯರ ಹೊಸ ಅಸ್ತ್ರ ಚೀನಾ ವಸ್ತು ಕೊಳ್ಳದಿರಲು ಶಪಥ !
ನವದೆಹಲಿ, ಮೇ 31, ಭಾರತದ ಜೊತೆ ಪದೇ ಪದೇ ಕಾಲುಕೆರೆದು ಜಗಳಕ್ಕೆ ಬರುತ್ತಿರುವ ಚೀನಾ ವಿರುದ್ಧ ಭಾರತೀಯರು ಹೊಸ ಅಸ್ತ್ರ ಝಳಪಿಸಿದ್ದಾರೆ. ಚೀನಾ ನಿರ್ಮಿತ ವಸ್ತುಗಳನ್ನು ಬಾಯ್ಕಾಟ್ ಮಾಡುವಂತೆ ಭಾರತದ ಯುವಜನತೆ ಅಭಿಯಾನ ಆರಂಭಿಸಿದ್ದು , ಚಿತ್ರರಂಗ ಮತ್ತು ಕ್ರೀಡಾಕ್ಷೇತ್ರಗಳಿಂದ ಭಾರೀ ಸ್ಪಂದನೆ ವ್ಯಕ್ತವಾಗಿದೆ.
ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಈ ಅಭಿಯಾನ ಶುರುವಾಗಿದ್ದು #boycottchineseproducts ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಕ್ಷಣ ಕ್ಷಣಕ್ಕೂ ಹೆಚ್ಚೆಚ್ಚು ಜನ ಚಳವಳಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಇನ್ನು ಮುಂದೆ ಚೀನಾ ನಿರ್ಮಿತ ಮೊಬೈಲ್ ಸೇರಿದಂತೆ ಯಾವುದೇ ವಸ್ತುಗಳನ್ನು ಕೊಳ್ಳುವುದಿಲ್ಲ ಎಂದು ಜನ ಶಪಥ ಮಾಡುತ್ತಿದ್ದಾರೆ. ಅಲ್ಲದೆ, ತಮ್ಮ ಮೊಬೈಲ್ ಗಳಲ್ಲಿರುವ ಚೀನಾ ಮೂಲದ ಏಪ್ ಗಳನ್ನು ಡಿಲೀಟ್ ಮಾಡುತ್ತಿದ್ದಾರೆ.

ಚೀನಾ ವಿರೋಧಿ ಅಭಿಯಾನಕ್ಕೆ ಬಾಲಿವುಡ್ ಸೇರಿದಂತೆ ಚಿತ್ರರಂಗದ ಗಣ್ಯರೂ ಕೈಜೋಡಿಸಿರುವುದು ವಿಶೇಷ. ನಟ ಅರ್ಷದ್ ವಾರ್ಸಿ, ರಣವೀರ್ ಶೌರಿ ಸೇರಿದಂತೆ ಅನೇಕರು ಜೊತೆಯಾಗಿದ್ದಾರೆ. ಬಾಲಿವುಡ್ ನ ಜನಪ್ರಿಯ ಚಿತ್ರ ತ್ರೀ ಈಡಿಯಟ್ಸ್ ಗೆ ಪ್ರೇರಣೆಯಾಗಿದ್ದ ಸೋನುಮ್ ವಾಂಗ್ಚುಕ್ ಅಭಿಯಾನ ಆರಂಭಿಸಿದ್ದು ಚೀನಾ ಮೂಲದ ಎಲ್ಲ ವಸ್ತುಗಳನ್ನು ಬಹಿಷ್ಕರಿಸುವಂತೆ ದೇಶದ ಜನರಲ್ಲಿ ಮನವಿ ಮಾಡಿದ್ದಾರೆ.
ಕೊರೊನಾ ವೈರಸ್ ಬಳಿಕ ಚೀನಾ ವಿರುದ್ಧ ವಿಶ್ವ ರಾಷ್ಟ್ರಗಳಲ್ಲಿ ಆಕ್ರೋಶದ ಅಲೆ ಎದ್ದಿತ್ತು. ಇತ್ತೀಚೆಗೆ ಜಮ್ಮು ಕಾಶ್ಮೀರದ ಲಡಾಖ್ ಪ್ರದೇಶದಲ್ಲಿ ಸೇನೆ ಜಮಾವಣೆ ಮಾಡಿ ಭಾರತದ ಶಕ್ತಿ ಉಡುಗಿಸಲು ಯತ್ನಿಸಿತ್ತು. ಆದರೆ, ಪ್ರತಿಯಾಗಿ ಭಾರತ ಸೇನೆಯೂ ಅಲ್ಲಿ ಜಮಾವಣೆಗೊಂಡು ತಕ್ಕ ಪ್ರತ್ಯುತ್ತರ ನೀಡಿದ್ದರಿಂದ ಚೀನಾ ಬಾಲ ಮುದುರಿಸಿಕೊಂಡಿತ್ತು, ಇಂಥ ಸಂದರ್ಭದಲ್ಲಿಯೇ ಭಾರತೀಯರು ಹೊಸ ಅಭಿಯಾನ ಆರಂಭಿಸಿದ್ದು, ಜನ ಸ್ವಯಂಪ್ರೇರಿತರಾಗಿ ಬೆಂಬಲ ಸೂಚಿಸುತ್ತಿರುವುದು ಚೀನಾಗೆ ನುಂಗಲಾರದ ತುತ್ತಾಗಿ ಪರಿಣಮಿಸಲಿದೆ.