Connect with us

FILM

ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆಯಲ್ಲ ಕೊಲೆ…..?

ದಿಶಾ ಸಾಲ್ಯಾನ್ – ಸುಶಾಂತ್ ಸಾವಿಗೂ ಇದ್ಯಾ ಲಿಂಕ್ ?

ಮುಂಬೈ, ಜೂನ್ 15, ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿಚಾರ ಹಿಂದಿ ಸಿನಿಮಾ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದೆ. ಸುಶಾಂತ್ ಸಾಯುವ ವ್ಯಕ್ತಿಯಲ್ಲ. ಆತನನ್ನು ಯಾರೋ ಸಾಯಿಸಿದ್ದಾರೆ ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದಾರೆ.

ಸುಶಾಂತ್ ಮೂಲತಃ ಬಿಹಾರದ ಪಾಟ್ನಾ ಮೂಲದವರಾಗಿದ್ದು, ಪಾಟ್ನಾದಲ್ಲಿ ಕುಟುಂಬಸ್ಥರು ಈ ಆರೋಪ ಮಾಡಿದ್ದಾರೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನಮಗೆ ಅನಿಸುತ್ತಿಲ್ಲ. ಈ ಘಟನೆ ಹಿಂದೆ ಏನೋ ಸಂಚು ನಡೆದಿರುವಂತಿದೆ. ಅವನನ್ನು ಕೊಲೆ ಮಾಡಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸುಶಾಂತ್ ಚಿಕ್ಕಪ್ಪ ಹೇಳಿದ್ದಾರೆ. ಪಾಟ್ನಾದಲ್ಲಿರುವ ಸುಶಾಂತ್ ಮನೆಗೆ ಆಗಮಿಸಿದ ಮಾಜಿ ಸಂಸದ ಪಪ್ಪು ಯಾದವ್ ಕೂಡ ಇಂಥದ್ದೇ ಆರೋಪ ಮಾಡಿದ್ದಾರೆ. ಸುಶಾಂತ್ ಆತ್ಮಹತ್ಯೆ ಮಾಡಿಲ್ಲ. ಅವನನ್ನು ವ್ಯವಸ್ಥಿತವಾಗಿ ಹತ್ಯೆ ಮಾಡಲಾಗಿದೆ. ಈ ಬಗ್ಗೆ ಸಿಬಿಐ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಇದೇ ವೇಳೆ, ಘಟನೆ ಬಗ್ಗೆ ಸುಶಾಂತ್ ಫ್ಯಾಮಿಲಿ ಡಾಕ್ಟರ್ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ಆತ ಕಳೆದ ಆರು ತಿಂಗಳಿನಿಂದ ಖಿನ್ನತೆಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಸುಶಾಂತ್ ತಂಗಿ ಕೂಡ ಆತ ಖಿನ್ನತೆಯಿಂದ ಬಳಲುತ್ತಿದ್ದ. ಕೆಲ ದಿನಗಳಿಂದ ಸರಿಯಾಗಿ ಮೆಡಿಸಿನ್ ತಗೊಳ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾಳೆ. ಇದೇ ವೇಳೆ, ಮೃತದೇಹವನ್ನು ಪೋಸ್ಟ್ ಮಾರ್ಟಂ ಮಾಡಲಾಗಿದ್ದು, ಪ್ರಾಥಮಿಕ ವರದಿಯಲ್ಲಿ ಆತ್ಮಹತ್ಯೆ ಎಂದೇ ದಾಖಲಿಸಲಾಗಿದೆ. ಶರೀರದ ಅವಯವಗಳನ್ನು ಹೆಚ್ಚಿನ ತಪಾಸಣೆಗಾಗಿ ಜೆಜೆ ಹಾಸ್ಪಿಟಲ್ ಗೆ ರವಾನಿಸಲಾಗಿದೆ. ಶರೀರದಲ್ಲಿ ಯಾವುದೇ ವಿಷದ ಅಂಶ ಇದೆಯೇ ಅನ್ನುವ ಬಗ್ಗೆ ಅಲ್ಲಿ ಪರೀಕ್ಷೆ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಸಂಶಯ ವ್ಯಕ್ತವಾಗಿದ್ದು ಹೇಗೆ ?

ಇಷ್ಟಕ್ಕೂ ಸುಶಾಂತ್ ಸಾವಿನಲ್ಲಿ ಸಂಶಯ ವ್ಯಕ್ತವಾಗಲು ಕಾರಣವಾಗಿದ್ದು ವಾರದ ಹಿಂದೆ ಆತನ ಮ್ಯಾನೇಜರ್ ಆಗಿದ್ದ ದಿಶಾ ಸಾಲ್ಯಾನ್ ಸಾವಿನ ಪ್ರಕರಣ. ಜೂನ್ 8ರಂದು ತಡರಾತ್ರಿ ಮಲಾಡ್ ನಲ್ಲಿರುವ ಅಪಾರ್ಟ್ ಮೆಂಟಿನಿಂದ 14ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದ ದಿಶಾ ಸಾವು ಆತ್ಮಹತ್ಯೆಯೋ, ಕೊಲೆಯೋ, ಆಕಸ್ಮಿಕವೋ ಅನ್ನುವ ಬಗ್ಗೆ ಇನ್ನೂ ಖಚಿತವಾಗಿಲ್ಲ. ದಿಶಾ ಸಾಲ್ಯಾನ್ ಜೊತೆಗೆ ಆರು ವರ್ಷಗಳಿಂದ ಅಫೇರ್ ಇಟ್ಟುಕೊಂಡಿದ್ದ ರೋಹಣ್ ರೈ ಫ್ಲಾಟಿನಲ್ಲಿ ಈ ಘಟನೆ ನಡೆದಿತ್ತು. ಪೊಲೀಸರ ಪ್ರಕಾರ, ಅಂದು ರಾತ್ರಿ ರೋಹಣ್ ರೈ ಫ್ಲಾಟಿನಲ್ಲಿ ದಿಶಾ ಸಾಲ್ಯಾನ್ ಸೇರಿದಂತೆ ಏಳೆಂಟು ಮಂದಿ ಸೀರಿಯಲ್ ಕಲಾವಿದರು ಸೇರಿ ಪಾರ್ಟಿ ಮಾಡಿದ್ದಾರೆ. ತಡರಾತ್ರಿ ಒಂದು ಗಂಟೆ ಸುಮಾರಿಗೆ ತನ್ನ ಕೊಠಡಿಗೆ ತೆರಳಿದ್ದ ದಿಶಾ ಕಿಟಕಿ ಮೂಲಕ ಮಹಡಿಯಿಂದ ಕೆಳಕ್ಕೆ ಬಿದ್ದು ಸಾವು ಕಂಡಿದ್ದಾಳೆ.

ಆದರೆ, ಆರು ವರ್ಷಗಳಿಂದ ಗೆಳೆಯರಾಗಿದ್ದ ದಿಶಾ ಮತ್ತು ರೋಹಣ್ ಮಧ್ಯೆ ಇತ್ತೀಚೆಗೆ ಸಂಬಂಧ ಹಳಸಿತ್ತು. ಅಫೇರ್ ಇದ್ದ ಕಾರಣಕ್ಕೆ ಮದುವೆಯಾಗಲು ಒತ್ತಾಯಿಸುತ್ತಿದ್ದ ದಿಶಾಳನ್ನು ರೋಹಣ್ ದೂರ ಮಾಡುತ್ತಿದ್ದ. ರೋಹಣ್ ಬೇರೊಬ್ಬಳ ಜೊತೆ ತಿರುಗಾಡುತ್ತಿದ್ದಾನೆ ಎಂಬ ವಿಚಾರದಲ್ಲಿ ಇವರ ಮಧ್ಯೆ ಜಗಳವಾಗಿತ್ತು. ದಿಶಾ ಕುಟುಂಬಸ್ಥರು ಕೂಡ, ರೋಹಣ್ ಬಿಟ್ಟು ಬರುವಂತೆ ಹೇಳಿದ್ದರು. ಇಂಥ ಸಮಯದಲ್ಲಿಯೇ ದಿಶಾ ಅಸಹಜ ಸಾವು ಕಂಡಿದ್ದು ನಟ ಸುಶಾಂತ್ ರಜಪೂತ್ ಸೇರಿದಂತೆ ಹಲವರನ್ನು ಚಿಂತೆಗೀಡು ಮಾಡಿತ್ತು. ಘಟನೆ ಬಗ್ಗೆ ಪೊಲೀಸರು ತನಿಖೆ ಶುರು ಮಾಡಿರುವಾಗಲೇ ಈಗ ಸುಶಾಂತ್ ಕೂಡ ಅಸಹಜ ರೂಪದಲ್ಲಿ ಸಾವು ಕಂಡಿದ್ದಾರೆ.

ಅಂದಹಾಗೆ, ದಿಶಾ ಈ ಹಿಂದೆ ಬಾಲಿವುಡ್ ನಟಿ ಐಶ್ವರ್ಯಾ ರೈ, ವರುಣ್ ಶರ್ಮ, ಭಾರ್ತಿ ಸಿಂಗ್, ಸುಶಾಂತ್ ಸೇರಿದಂತೆ ಹಲವರಿಗೆ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಹೀಗಾಗಿ ನಾಲ್ಕೇ ದಿನಗಳ ಅಂತರದಲ್ಲಿ ಇಬ್ಬರು ಕೂಡ ಅಸಹಜ ಸಾವನ್ನಪ್ಪಿದ್ದು ಸಾವಿನಲ್ಲಿ ಏನೋ ಲಿಂಕ್ ಇರಬಹುದೆಂದು ಶಂಕಿಸಲಾಗುತ್ತಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *