Connect with us

LATEST NEWS

ಚೀನಾ ಗಡಿಯಲ್ಲಿ ಘರ್ಷಣೆ – ಭಾರತದ ಕರ್ನಲ್ ಸೇರಿ ಮೂವರು ಹುತಾತ್ಮ

ನವದೆಹಲಿ, ಜೂನ್ 16, ಅನಿರೀಕ್ಷಿತ ಬೆಳವಣಿಗೆಯಲ್ಲಿ ಜಮ್ಮು ಕಾಶ್ಮೀರದ ಲಡಾಕ್ ಗಡಿಯಲ್ಲಿ ಘರ್ಷಣೆ ಏರ್ಪಟ್ಟಿದ್ದು, ಭಾರತ ಸೇನೆಯ ಕರ್ನಲ್ ದರ್ಜೆಯ ಅಧಿಕಾರಿ ಮತ್ತು ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ.


ಕಾಶ್ಮೀರದ ಲಡಾಕ್ ಪ್ರಾಂತದ ಗಡಿಭಾಗದಲ್ಲಿ ಕಳೆದ ಒಂದು ತಿಂಗಳಿನಿಂದ ಕ್ಯಾತೆ ತೆಗೆಯುತ್ತಿರುವ ಚೀನಾ ಸೇನೆ ನಿನ್ನೆ ರಾತ್ರಿ ಭಾರತೀಯ ಸೇನೆಯ ಮೇಲೆ ದಾಳಿ ನಡೆಸಿದ್ದು ಸ್ಥಳದಲ್ಲೇ ಮೂವರು ಸಾವು ಕಂಡಿದ್ದಾರೆ. ಚೀನಾ ಸೇನೆ ಗಡಿಯಿಂದ ಹಿಂತೆಗೆಯುತ್ತಿದ್ದೇವೆ ಎನ್ನುತ್ತಿರುವಾಗಲೇ ಈ ಆಘಾತಕಾರಿ ಘಟನೆ ನಡೆದಿದೆ. ಸೇನೆಯ ಹಿರಿಯ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಂತೆಯೇ ಚೀನಾ ಸೇನೆ ಉದ್ಧಟತನ ಮೆರೆದಿದ್ದು ಭಾರತದ ಕಡೆಯಿಂದ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.


ಕಳೆದ ಒಂದೂವರೆ ತಿಂಗಳಿನಿಂದ ಚೀನಾ ಗಡಿ ವಿಚಾರದಲ್ಲಿ ಘರ್ಷಣೆಗೆ ಇಳಿದಿತ್ತು. ಆದರೆ, ಸೇನಾ ಕಮಾಂಡರ್‌ಗಳ ಸಭೆಯ ಬಳಿಕ ಗಡಿ ಉದ್ವಿಗ್ನತೆ ಕಡಿಮೆಯಾಗಿತ್ತು. ಪೂರ್ವ ಲಡಾಖ್ ಗಡಿಯಿಂದ ಸೈನ್ಯವನ್ನು ಹಿಂಪಡೆಯುವ ಪ್ರಕ್ರಿಯೆಗೂ ಚಾಲನೆ ನೀಡಲಾಗಿತ್ತು. ಸದ್ಯ ಗಡಿಯಲ್ಲಿ ಉಭಯ ಸೇನೆಗಳ ಹಿರಿಯ ಅಧಿಕಾರಿಗಳು ಸಭೆ ನಡೆಸುತ್ತಿದ್ದು, ಸಂಭಾವ್ಯ ಅನಾಹುತವನ್ನು ತಪ್ಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ.
ಲಡಾಕ್ ಪ್ರಾಂತ್ಯದ ಗ್ಯಾಲ್ವನ್ ಕಣಿವೆಯಲ್ಲಿ ಮೂವರು ಮೃತಪಟ್ಟಿರುವುದನ್ನು ಮಾತ್ರ ಸೇನೆ ಖಚಿತಪಡಿಸಿದ್ದು ಅವರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ. ಗಡಿಯ ಉದ್ದಕ್ಕೂ ಚೀನಾ ಮತ್ತು ಭಾರತದ ಸೇನೆ ಒಂದು ತಿಂಗಳಿನಿಂದಲೂ ಜಮಾಯಿಸಿದ್ದು ಸದ್ಯಕ್ಕೆ ಸೇನೆ ಹಿಂತೆಗೆಯುವ ಬಗ್ಗೆ ಮಾತುಕತೆ ನಡೀತಿತ್ತು.


ಕಳೆದ ಮೇ 5ರಂದು ಲಡಾಕ್ ಗಡಿಯ ಪಾಂಗೊಂಗ್ ಸೊ ಪ್ರದೇಶದಲ್ಲಿ 250ರಷ್ಟು ಭಾರತ ಮತ್ತು ಚೀನಾದ ಸೈನಿಕರು ಸಂಘರ್ಷಕ್ಕೆ ಇಳಿದಿದ್ದರು. ಆನಂತ್ರ ಎರಡೂ ಕಡೆಯಿಂದ ಮಾತುಕತೆ ನಡೆದು ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಆಬಳಿಕ ಮೇ 9ರಂದು ಸಿಕ್ಕಿಂ ಪ್ರಾಂತದ ಉತ್ತರ ಭಾಗದಲ್ಲೂ ಇದೇ ಮಾದರಿ ಸಂಘರ್ಷ ಆಗಿತ್ತು.


ಭಾರತ- ಚೀನಾ ಮಧ್ಯೆ 3488 ಕಿಮೀ ಉದ್ದಕ್ಕೆ ಗಡಿ ಚಾಚಿಕೊಂಡಿದ್ದು, ಹಿಮಾಚಲ ಪ್ರದೇಶದ ಭಾಗವನ್ನು ದಕ್ಷಿಣ ಟಿಬೆಟ್ ಗೆ ಸೇರಬೇಕೆಂದು ಚೀನಾ ವಾದಿಸುತ್ತಿರುವುದು ಸಂಘರ್ಷಕ್ಕೆ ಕಾರಣ. ಆ ಭಾಗದಲ್ಲಿ ರಸ್ತೆ ನಿರ್ಮಾಣ, ಸೇನೆಯ ಬಂಕರ್ ಗಳನ್ನು ಒಯ್ಯುವುದು ಭಾರತದ ಆಕ್ಷೇಪಕ್ಕೆ ಕಾರಣವಾಗಿದೆ.  ಅಂದಹಾಗೆ, ಚೀನಾ ಭಾರತದ ಸೇನೆಯ ಮೇಲೆ ದಾಳಿ ಕಾರ್ಯಾಚರಣೆ ನಡೆಸಿದ್ದು 1965ರ ಯುದ್ಧದ ಬಳಿಕ ಇದೇ ಮೊದಲು ಎನ್ನಲಾಗುತ್ತಿದೆ.

Facebook Comments

comments