LATEST NEWS
ಕಾಸರಗೋಡು – ಸಮುದ್ರ ಪಾಲಾಗಿದ್ದ ಮೂವರ ಮೃತದೇಹ ಪತ್ತೆ
ಕಾಸರಗೋಡು ಜುಲೈ 5: ಕಾಸರಗೋಡಿನ ಕಿಯೂರಿನಲ್ಲಿ ನಿನ್ನೆ ಮೀನು ಹಿಡಿಯಲು ಹೋಗಿ ಸಮುದ್ರ ಪಾಲಾಗಿದ್ದ ಮೂವರ ಮೃತದೇಹ ಪತ್ತೆಯಾಗಿದೆ.
ಮೃತರನ್ನು ಕಸಬಾ ತೀರದ ಸಂದೀಪ್ (34), ರತೀಶ್ (35) ಮತ್ತು ಕಾರ್ತಿಕ್ (22) ಎಂದು ಗುರುತಿಸಲಾಗಿದ್ದು, ಅವರ ಮೃತದೇಹ ಇಂದು ಬೆಳಗ್ಗೆ ಬೇಕಲ ಕೋಟಿಕುಳಂ ತೀರದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಸಬಾ ತೀರದಿಂದ ಆಂಜನೇಯ ಎಂಬ ಫೈಬರ್ ದೋಣಿಯಲ್ಲಿ ಏಳು ಮಂದಿ ಮೀನುಗಾರಿಕೆಗೆ ತೆರಳಿದ್ದು, ಕಿಯೂರು ಸಮೀಪ ಅಲೆಗಳ ಅಬ್ಬರಕ್ಕೆ ದೋಣಿ ಮಗುಚಿ ಬಿದ್ದು ಈ ಘಟನೆ ನಡೆದಿತ್ತು. ಘಟನೆ ಸಂದರ್ಭ ದೋಣಿಯಲ್ಲಿದ್ದ ನಾಲ್ವರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದರು. ಆದರೆ ಮೂವರು ನಾಪತ್ತೆಯಾಗಿದ್ದರು. ದುರಂತ ಬಳಿಕ ಸ್ಥಳೀಯ ಮೀನುಗಾರರು, ಕರಾವಳಿ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಚರಣೆ ನಡೆಸಿದ್ದು, ರಾತ್ರಿ ತನಕ ಶೋಧ ಮುಂದುವರಿದಿತ್ತು.