Connect with us

    LATEST NEWS

    ದಿನಕ್ಕೊಂದು ಕಥೆ- ಅಜ್ಜಿ

    ಅಜ್ಜಿ

    ಬಿಸಿಲಿನ ಝಳವನ್ನು ತಡಿಯೋಕ್ಕಾಗದೆ ಸೂರ್ಯ ಮೋಡವನ್ನು ಕರೆದು ಮರೆಮಾಡಿ ನೆರಳಿಗೆ ಬಂದು ನಿಂತ. ಅದಕ್ಕೆ ಕಾಯುತ್ತಿದ್ದರೋ ಅಥವಾ ಸಮಯವಾಯಿತೋ ಗೊತ್ತಿಲ್ಲ ಕತ್ತಿಹಿಡಿದು ಹುಲ್ಲು ತರೋಕೆ ತೋಟದ ಕಡೆಗೆ ನಡೆದರು ನನ್ನ ಲಕ್ಷ್ಮಿ ಅಜ್ಜಿ. ಅವರ ವಯಸ್ಸನ್ನು ಮುಖದ ನೆರಿಗೆ ಮತ್ತು ಬೆಳ್ಳಿಯ ಕೇಶವನ್ನು ನೋಡಿ ಹೇಳಬೇಕೇ ಹೊರತು ಅವರ ಉತ್ಸಾಹ ನೋಡಿ ಅಲ್ಲ. ಶ್ರಮವೇ ಅವರ ಮುಂದೆ ಬದಿಗೆ ಸರಿದು ನಿಲ್ಲುತ್ತದೆ.

    ಮಾತಿಗೆ ಸಿಗೋದೇ ಕಡಿಮೆ .ಆದರೆ ಆ ದಿನ ಹುಲ್ಲು ಹೊರುತ್ತಿರುವಾಗಲೇ ಮಾತಿಗಾರಂಭಿಸಿದೆ. “ಹುಟ್ಟಿನಿಂದ ಇಲ್ಲೇ ಇದ್ದೀರಲ್ಲಟ ನಿಮಗೆ ದೇವಸ್ಥಾನ ,ನದಿ, ಕಾಡು ಸಮುದ್ರತೀರ ಇದನ್ನೆಲ್ಲಾ ನೋಡಬೇಕು ಅಂತ ಅನಿಸುವುದಿಲ್ಲವಾ?”. “ಹೋಗೋ, ನಾನು ನನ್ನ ದನ ,ಕರು, ನಾಯಿನ ಬಿಟ್ಟು ಬರಬೇಕಾ ಆಗೋದಿಲ್ಲ!!.

    ಅಲ್ಲಾ ಅದನ್ನೆಲ್ಲಾ ನೋಡಿ ಆಗ್ಲಿಕ್ಕೆ ಏನಿದೆ?. ಇಲ್ಲಿ ಬೇಜಾರಾದವರೂ ಅಥವಾ ಹೊಸದೇನೋ ಬೇಕಾಗಿರುವವರು ಅಲ್ಲಿ ಹೋಗ್ತಾರೆ .ನನಗೆ ಇಲ್ಲಿ ಸಂಭ್ರಮ ಇದೆ, ದಿನವೂ ಉತ್ಸುಕತೆ ಇದೆ. ಅಲ್ಲಿಗೆ ಹೋಗಕ್ಕಾಗಲ್ಲ ಅನ್ನುವ ನೋವಿಲ್ಲ ಅದು ಹೇಗಿದೆಯೋ ಅನ್ನುವ ಕುತೂಹಲವೂ ಇಲ್ಲ. ಇಲ್ಲಿ ನದಿಯಿಲ್ಲಾ, ಚಿತ್ರದಲ್ಲಿ ತೋರಿಸಿರುವಂತೆ ಬೆಟ್ಟ-ಗುಡ್ಡಗಳು ,ಪುರಾಣದ ದೇವಾಲಯ, ಹಳೆಯ ಮಸೀದಿ, ಇತಿಹಾಸ ಕಥೆ ಹೇಳುವ ಜಾಗವೂ ಇಲ್ಲ ,ಸಂಘ-ಸಂಸ್ಥೆ ಇಲ್ಲ, ಪಕ್ಷಗಳಿಲ್ಲ,ಇದುವೇ ಸ್ವರ್ಗ.

    ಇನ್ಯಾವುದು ಬೇಡ. ಇಷ್ಟಪಡೋದನ್ನ ಹುಡುಕುವುದಕ್ಕಿಂತ ಇರೋದನ್ನೇ ಇಷ್ಟ ಪಡೋದು ಒಳ್ಳೆದಲ್ವಾ ಮಗ”
    ಮನೆ ತಲುಪಿಯಾಗಿತ್ತು ಮತ್ತೆ ಕೆಲಸದಲ್ಲಿ ತೊಡಗಿದರು ಅಜ್ಜಿ .ಕೊನೆಯ ಮಾತು ಮತ್ತೆ ಮತ್ತೆ ಕಿವಿಯಲ್ಲಿ ಅನುರಣಿಸುತ್ತಲೇ ಇತ್ತು. ಇಷ್ಟಪಡೋದನ್ನ…..

    ಧೀರಜ್ ಬೆಳ್ಳಾರೆ

    Share Information
    Advertisement
    Click to comment

    You must be logged in to post a comment Login

    Leave a Reply