KARNATAKA
ಏರೋ ಇಂಡಿಯಾದಲ್ಲಿ ತೇಜಸ್ ಯುದ್ಧ ವಿಮಾನ ಹಾರಾಟ ನಡೆಸಿದ ತೇಜಸ್ವಿ ಸೂರ್ಯ!
ಬೆಂಗಳೂರು, ಫೆಬ್ರವರಿ 04 : ಬಿಜೆಪಿಯ ಯುವ ಸಂಸದ ತೇಜಸ್ವಿ ಸೂರ್ಯ ಇದೀಗ ತೇಜಸ್ ಯುದ್ಧ ವಿಮಾನ ಹಾರಾಟ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಬೆಂಗಳೂರಿನ ಯಲಹಂಕದಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2021 ಕಾರ್ಯಕ್ರಮದ ಹಿನ್ನೆಲೆ ಏರ್ ಶೋ ನಡೆಯುತ್ತಿದೆ. ಹಲವು ಲೋಹದ ಹಕ್ಕಿಗಳು ಆಕಾಶದಲ್ಲಿ ರಾರಾಜಿಸುತ್ತಿದೆ.
ಇದೀಗ ಏರೋ ಇಂಡಿಯಾ ಶೋನಲ್ಲಿ ಭಾಗವಹಿಸಿದ್ದ ಬೆಂಗಳೂರಿನ ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಲಘು ಯುದ್ದ ವಿಮಾನ ತೇಜಸ್ ಏರಿ ಹಾರಾಟ ನಡೆಸಿದರು. ಬಳಿಕ ಹಾರಾಟದ ಅನುಭವದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ತೇಜಸ್ವಿ ಸೂರ್ಯ, ಭಾರತೀಯ ವಾಯುಸೇನಾ ಸಾಮರ್ಥ್ಯವನ್ನು ಕಣ್ತುಂಬಿಕೊಳ್ಳುವ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯ ಎಂದಿದ್ದಾರೆ.
ವಾಯುಸೇನೆ ಸಮರ್ಥ ಭಾರತೀಯರ ಹೆಮ್ಮೆಯಾಗಿದ್ದು, ಅವರ ಪ್ರತಿನಿಧಿಯಾಗಿ ಏರೋ ಇಂಡಿಯಾದಲ್ಲಿ ಭಾಗಿಯಾಗಿರುವುದಾಗಿ ತೇಜಸ್ವಿ ಸೂರ್ಯ ತಿಳಿಸಿದರು. ದೇಶೀಯ ಲಘು ಯುದ್ದ ವಿಮಾನ ತೇಜಸ್ ನಲ್ಲಿ ಹಾರಾಟ ನಡೆಸಿದ ಅನುಭವ ಶಬ್ದಗಳಲ್ಲಿ ವರ್ಣಿಸಲು ಅಸಾಧ್ಯ ಎಂದು ಇದೆ ವೇಳೆ ಸಂಸದರು ತಿಳಿಸಿದರು.
ನಮ್ಮ ವಾಯುಗಡಿಗಳು ಅದೆಷ್ಟು ಸುರಕ್ಷಿತ ಎಂಬುದಕ್ಕೆ ತೇಜಸ್ ತಾಜಾ ಉದಾಹರಣೆ ಎಂದು ಕೂಡ ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟರು. ತೇಜಸ್ ನಮ್ಮ ಎಚ್‌ಎಎಲ್ ತಯಾರಿಸಿದ ಲಘು ಯುದ್ಧ ವಿಮಾನವಾಗಿದೆ. ಇದೇ ಮೊದಲ ಬಾರಿಗೆ ಭಾರತೀಯ ವಾಯುಸೇನೆ ಬರೋಬ್ಬರಿ 48,000 ಕೋಟಿ ಮೊತ್ತದ ತೇಜಸ್ ಯುದ್ಧ ವಿಮಾನ ಖರೀದಿಗೆ ಎಚ್‌ಎಎಲ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದರಲ್ಲಿ 73 LCA ತೇಜಸ್ MK -1A ಹಾಗೂ 10 LCA ತೇಜಸ್ MK-1 ಯುದ್ಧ ವಿಮಾನಗಳಿರಲಿವೆ.