BANTWAL
ಯಕ್ಷಗಾನದ ‘ಹಾಸ್ಯರಾಜ’ ಜಯರಾಮ ಆಚಾರ್ಯರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ,ಶಾಸಕ ವಿಜಯೇಂದ್ರ ಸಂತಾಪ..!
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ನಿವಾಸಿ, ಯಕ್ಷಗಾನದ ‘ಹಾಸ್ಯರಾಜ’ ಎಂದೇ ಹೆಸರುವಾಸಿಯಾಗಿದ್ದ, ಶುದ್ಧ ಹಾಸ್ಯದ ಮೂಲಕ ಪ್ರೇಕ್ಷಕರ ಮನರಂಜಿಸುತ್ತಿದ್ದ ಬಂಟ್ವಾಳ ಜಯರಾಮ ಆಚಾರ್ಯ ಅವರ ನಿಧನಕ್ಕೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಜಯರಾಮ ಆಚಾರ್ಯರು ಸರಳ, ಸಜ್ಜನ, ವಿನಯವಂತ ಹಾಸ್ಯಗಾರರಾದ ಆಚಾರ್ಯರು ಪ್ರಸ್ತುತ ಹನುಮಗಿರಿ ಮೇಳದ ಕಲಾವಿದರಾಗಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಸಲ್ಪಡುತ್ತಿದ್ದ ‘ಲಲಿತ ಕಲಾ ಕೇಂದ್ರ’ಕ್ಕೆ ಸೇರಿ ಯಕ್ಷಗಾನ ಹೆಜ್ಜೆಗಾರಿಕೆ ಕಲಿತರು. ಅದಾದ ಬಳಿಕ ಕಟೀಲು ಮೇಳದಲ್ಲಿ 4 ವರ್ಷ, ಪುತ್ತೂರು ಮೇಳ, ಕದ್ರಿ ಮೇಳ ಹಾಗೂ ಕುಂಬಳೆ ಮೇಳಗಳ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು. ಕದ್ರಿ ಮೇಳದ ತುಳುಪ್ರಸಂಗದಲ್ಲಿ ವೈವಿಧ್ಯಮಯ ಹಾಸ್ಯವನ್ನು ಮಾಡಿ ಪ್ರೇಕ್ಷಕರನ್ನು ರಂಜಿಸಿದವರು ಎಂದು ಸ್ಮರಿಸಿದ್ದಾರೆ. ವಿವಿಧ ಮೇಳಗಳಲ್ಲಿ ಸುಮಾರು 50 ವರ್ಷಗಳ ಕಾಲ ಯಕ್ಷಗಾನದ ಹಾಸ್ಯಗಾರ ಪಾತ್ರವಲ್ಲದೇ, ಅಗತ್ಯವಿದ್ದಾಗ ಇತರ ಪಾತ್ರಗಳನ್ನೂ ನಿರ್ವಹಿಸಿದ್ದಾರೆ ಎಂದಿದ್ದಾರೆ.
ಅವರ ಕುಟುಂಬಸ್ಥರು ಬಂಧುಗಳು, ಹಿತೈಷಿಗಳು ಹಾಗೂ ಅಭಿಮಾನಿಗಳಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.