KARNATAKA
ರಾಜ್ಯಸಭೆ : ಬಿಜೆಪಿ ಆಯ್ಕೆ ಕಗ್ಗಂಟು- ಕೋರೆ, ಪ್ರಕಾಶ್ ಶೆಟ್ಟಿ, ಕತ್ತಿ ಹೆಸರು ಶಿಫಾರಸು
ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಮೂವರ ಹೆಸರನ್ನು ಫೈನಲ್
ಬೆಂಗಳೂರು, ಜೂನ್ 6 : ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದ್ದು ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಮೂವರ ಹೆಸರನ್ನು ಫೈನಲ್ ಮಾಡಿ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ.
ಬೆಳಗಾವಿ ಮೂಲದ ಪ್ರಭಾಕರ ಕೋರೆ, ಹೊಟೇಲ್ ಉದ್ಯಮಿ ಪ್ರಕಾಶ್ ಶೆಟ್ಟಿ, ರಮೇಶ್ ಕತ್ತಿ ಹೆಸರನ್ನು ಸೂಚಿಸಿ ಪಕ್ಷದ ಕೇಂದ್ರೀಯ ಸಮಿತಿಗೆ ಕಳಿಸಲಾಗಿದೆ. ಇಂದು ಸಂಜೆ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸಿಎಂ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ನಿರ್ಮಲ್ ಕುಮಾರ್ ಸುರಾನ ಸೇರಿದಂತೆ ಪ್ರಮುಖ ಸಚಿವರು ಪಾಲ್ಗೊಂಡಿದ್ದರು.
ಆರಂಭದಲ್ಲಿ ಇನ್ ಫೋಸಿಸ್ ನ ಸುಧಾಮೂರ್ತಿ, ತೇಜಸ್ವಿನಿ ಅನಂತ್ ಕುಮಾರ್, ವಿಜಯ ಸಂಕೇಶ್ವರ, ಕುಂದಾಪುರ ಮೂಲದ ಬ್ಯಾಂಕರ್ ಕೆ.ವಾಮನ್ ಕಾಮತ್ ಹೆಸರು ಮುನ್ನೆಲೆಗೆ ಬಂದಿತ್ತು. ಐಸಿಐಸಿಐ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಕೆ.ವಾಮನ ಕಾಮತ್ ಹೆಸರು ಪಕ್ಷದ ಕೇಂದ್ರೀಯ ಸಮಿತಿಯಿಂದಲೇ ಪರಿಗಣನೆಗೆ ಬಂದಿತ್ತು. ಕೇಂದ್ರಕ್ಕೆ ಬ್ಯಾಂಕಿಂಗ್ ತಜ್ಞರ ಅಗತ್ಯ ಇರುವುದರಿಂದ ಕೆ.ವಾಮನ್ ಕಾಮತ್ ಹೆಸರು ಪ್ರಧಾನಿ ಮೋದಿಯವರ ತಂಡದ ಆಯ್ಕೆಯಾಗಿತ್ತು ಅನ್ನುವ ಮಾತು ಕೇಳಿಬಂದಿತ್ತು. ಆದರೂ, ರಾಜ್ಯದಲ್ಲಿ ಸರಕಾರ ಇರುವ ಹಿನ್ನೆಲೆಯಲ್ಲಿ ಸಂಭಾವ್ಯರ ಲಿಸ್ಟ್ ಕೇಳಲಾಗಿತ್ತು.
ಇದೇ ವೇಳೆ, ಎರಡು ಅವಧಿಗೆ ರಾಜ್ಯಸಭೆ ಸದಸ್ಯರಾದ ಶಿಕ್ಷಣೋದ್ಯಮಿ ಪ್ರಭಾಕರ ಕೋರೆ ಹೆಸರನ್ನು ಈ ಬಾರಿ ಪರಿಗಣಿಸದಿರಲು ಪಕ್ಷ ನಿರ್ಧರಿಸಿತ್ತು. ಕೋರೆ ಬದಲಿಗೆ ಲಿಂಗಾಯತ ಕೋಟಾ ನೆಲೆಯಲ್ಲಿ ವಿಜಯ ಸಂಕೇಶ್ವರ ಹೆಸರು ಚಾಲ್ತಿಗೆ ಬಂದಿತ್ತು. ಆದರೆ, ಕೋರ್ ಕಮಿಟಿ ಮತ್ತು ಈ ಹಿಂದಿನ ಸಭೆಯಲ್ಲಿ ಗೋಲ್ಡ್ ಫಿಂಚ್ ಹೊಟೇಲ್ ಸಮೂಹದ ಪ್ರಕಾಶ್ ಶೆಟ್ಟಿ ಪರವಾಗಿ ಹೆಚ್ಚಿನ ಸಚಿವರು ಬ್ಯಾಟಿಂಗ್ ಮಾಡಿದ್ದರಿಂದ ಆ ಹೆಸರನ್ನೂ ಶಿಫಾರಸು ಮಾಡಲಾಗಿದೆ. ಪ್ರಕಾಶ್ ಶೆಟ್ಟಿ ಸಿಎಂ ಯಡಿಯೂರಪ್ಪ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ಡಿಕೆ ಆಪ್ತರೂ ಆಗಿರುವ ಹಿನ್ನೆಲೆಯಲ್ಲಿ ಆ ಹೆಸರನ್ನು ಪರಿಗಣಿಸಿರುವ ಸಾಧ್ಯತೆಯಿದೆ.
ಇದೇನಿದ್ದರೂ, ಬಿಜೆಪಿಗೆ ಎರಡು ಅಭ್ಯರ್ಥಿಗಳನ್ನಷ್ಟೇ ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲಿಸಬಹುದು. ಮೂರನೇ ಅಭ್ಯರ್ಥಿ ನಿಲ್ಲಿಸಿದರೆ ಮತಕ್ಕಾಗಿ ಜಟಾಪಟಿ ನಡೆಸಬೇಕಾಗುತ್ತದೆ. ಈಗಾಗ್ಲೇ ಕಾಂಗ್ರೆಸಿನಿಂದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಮತ್ತು ಜೆಡಿಎಸ್ ನಿಂದ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರ ಹೆಸರನ್ನು ಫೈನಲ್ ಮಾಡಲಾಗಿದೆ. ಆದರೆ, ದೇವೇಗೌಡರು ಸ್ಪರ್ಧಿಸುವುದನ್ನು ಇನ್ನೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಪಕ್ಷದ ಮುಖಂಡರಿಗೆ ಆ ಬಗ್ಗೆ ಒಪ್ಪಿಗೆಯನ್ನೂ ಕೊಟ್ಟಿಲ್ಲ ಎನ್ನಲಾಗುತ್ತಿದೆ. ಒಂದ್ವೇಳೆ, ಉದ್ಯಮಿ ಪ್ರಕಾಶ್ ಶೆಟ್ಟಿಗೆ ಜೆಡಿಎಸ್ ಕೂಡ ಬೆಂಬಲ ಸೂಚಿಸಿದರೆ ಅವರ ಆಯ್ಕೆ ಸರಾಗವಾಗಲಿದೆ.
ಒಟ್ಟಿನಲ್ಲಿ ರಾಜ್ಯದಲ್ಲಿ ಬಹುಮತದೊಂದಿಗೆ ಆಡಳಿತದಲ್ಲಿರುವ ಬಿಜೆಪಿಗೆ ಉದ್ಯಮಿಗಳನ್ನು ರಾಜ್ಯಸಭೆಗೆ ಕಳಿಸಬೇಕಾದ ಅಗತ್ಯ ಇದ್ದಿರಲಿಲ್ಲ. ರಾಜ್ಯಸಭೆಗೆ ವಿಷಯ ತಜ್ಞರನ್ನು ಪರಿಗಣಿಸಬೇಕು ಎನ್ನುವುದು ಸಾಮಾನ್ಯ ನಂಬಿಕೆ. ಆದರೆ, ಒಂದೆಡೆ ರಮೇಶ್ ಕತ್ತಿಗಾಗಿ ಟಿಕೆಟ್ ಪಡೆಯಲು ಬೆಳಗಾವಿಯ ಸೋದರರು ಕಾಳಗ ಶುರು ಮಾಡಿದ್ದರೆ, ಮತ್ತೊಂದೆಡೆ ಉಳ್ಳವರ ಲಾಬಿ ಶಿಸ್ತಿನ ಪಕ್ಷದ ಕೈ ಕಟ್ಟಿ ಹಾಕಿದಂತಿದೆ ಎನ್ನದೆ ವಿಧಿಯಿಲ್ಲ.