LATEST NEWS
ಗುತ್ತಿಗೆದಾರರಿಗೆ, ನಿಷ್ಟಾವಂತ ಸರ್ಕಾರಿ ಅಧಿಕಾರಿಗಳಿಗೆ ಆತ್ಮಹತ್ಯೆಯೇ ಅವರ ಪಾಲಿನ ಗ್ಯಾರಂಟಿಯಾಗಿದೆ – ಶಾಸಕ ಕಾಮತ್
ಮಂಗಳೂರು ಜನವರಿ 03: ರಾಜ್ಯದಲ್ಲಿ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಾಡಿನ ಜನರಿಗಷ್ಟೆ ಅಲ್ಲ, ಗುತ್ತಿಗೆದಾರರಿಗೆ, ನಿಷ್ಟಾವಂತ ಸರ್ಕಾರಿ ಅಧಿಕಾರಿಗಳಿಗೂ ನೆಮ್ಮದಿ ಇಲ್ಲ. ಆತ್ಮಹತ್ಯೆಯೇ ಅವರ ಪಾಲಿನ ಗ್ಯಾರಂಟಿಯಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಮಿನಿ ವಿಧಾನ ಸೌಧದ ಬಳಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಹಾಗೂ ಪೋಸ್ಟರ್ ಅಭಿಯಾನದಲ್ಲಿ ಮಾತನಾಡಿದ ಅವರು ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಸಚಿವರ, ಶಾಸಕರ, ಹಾಗೂ ಅವರುಗಳ ಆಪ್ತ ಸಹಾಯಕರ ಒತ್ತಡ, ಬೆದರಿಕೆಗೆ ಸರ್ಕಾರಿ ನೌಕರರು, ಗುತ್ತಿಗೆದಾರರು, ಸಾಲು ಸಾಲಾಗಿ ಪ್ರಾಣ ಕಳೆದುಕೊಳ್ಳುವಂತಾಗಿದೆ. ಇದರಿಂದ ಪ್ರಾಣ ಕಳೆದುಕೊಂಡವರ ಕುಟುಂಬ ಬೀದಿಗೆ ಬರುತ್ತಿದ್ದಾರೆ. ಪ್ರಿಯಾಂಕ್ ಖರ್ಗೆಯ ಆಪ್ತರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಚಿನ್ ಪ್ರಕರಣವನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಕುರ್ಚಿ ಅಲುಗಾಡುವ ಭಯದಿಂದ ಸಿದ್ದರಾಮಯ್ಯನವರು, ಹಾಗೂ ಮುಂದೆ ಮುಖ್ಯಮಂತ್ರಿ ಕುರ್ಚಿ ಕೈ ತಪ್ಪಬಹುದು ಎಂಬ ಭಯದಿಂದ ಡಿಕೆಶಿಯವರು ಪ್ರಿಯಾಂಕ ಖರ್ಗೆ ವಿರುದ್ಧ ಮಾತನಾಡುತ್ತಿಲ್ಲ ಎಂದರು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ ಆತ್ಮಹತ್ಯೆ ಪ್ರಕರಣ, ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣರ ಕಿರುಕುಳದಿಂದ ಬೇಸತ್ತು ಹೈಕೋರ್ಟ್ ನಲ್ಲಿ ನ್ಯಾಯಾಧೀಶರ ಎದುರೇ ನನಗೆ ಜೀವ ಭಯವಿದೆ ಎಂದು ಕಣ್ಣೀರಿಟ್ಟ ಸರ್ಕಾರಿ ಅಧಿಕಾರಿಯ ಪ್ರಕರಣ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಆಪ್ತ ಸಹಾಯಕನ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ರುದ್ರೇಶ್ ಪ್ರಕರಣ, ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಅವರ ಪುತ್ರನ ಕಿರುಕುಳದಿಂದ ಚಿತ್ರಹಿಂಸೆ ಅನುಭವಿಸಿ ಕೊನೆಯುಸಿರೆಳೆದ ದಲಿತ ಇನ್ಸೆಕ್ಟರ್ ಪರಶುರಾಮ್ ಸೇರಿದಂತೆ ರಾಜ್ಯದ ವಿವಿಧಲ್ಲಿ ನಡೆದ ಗುತ್ತಿಗೆದಾರರ ಆತ್ಮಹತ್ಯೆ ಪ್ರಕರಣಗಳನ್ನು ಉಲ್ಲೇಖಿಸಿ, ಅನೇಕ ಗುತ್ತಿಗೆದಾರರು ಕೊನೆಪಕ್ಷ ದಯಾಮರಣಕ್ಕೆ ಅವಕಾಶ ನೀಡಿ ಎಂದು ಗೋಗರೆಯುತ್ತಿದ್ದಾರೆ ಎಂದು ಶಾಸಕರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಪ್ರತಿಭಟನೆಯಲ್ಲಿ ರಮೇಶ್ ಕಂಡೆಟ್ಟು, ಪ್ರೇಮಾನಂದ ಶೆಟ್ಟಿ, ವಿಕಾಸ್ ಪುತ್ತೂರು, ನಂದನ್ ಮಲ್ಯ, ಮೋನಪ್ಪ ಭಂಡಾರಿ, ಪೂಜಾ ಪೈ, ಉಪಮೇಯರ್ ಭಾನುಮತಿ, ಸಂಜಯ್ ಪ್ರಭು, ಸೇರಿದಂತೆ ಮ.ನ.ಪಾ ಸದಸ್ಯರು, ಅನೇಕ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು