KARNATAKA
ವಿಧಾನ ಸಭಾ ವಿಪಕ್ಷ ನಾಯಕರಾಗಿ ಬಿಜೆಪಿ ಹಿರಿಯ ಶಾಸಕ ಆರ್. ಅಶೋಕ್ ಆಯ್ಕೆ..!

ಬೆಂಗಳೂರು: ಕೊನೆಗೂ ಬಿಜೆಪಿ ಹೈಕಮಾಂಡ್ ಅಳೆದು ತೂಗಿ ಬೆಂಗಳೂರಿನ ಪದ್ಮನಾಭಗರ ಕ್ಷೇತ್ರದ ಶಾಸಕ ಆರ್. ಆಶೋಕ ಅವರನ್ನು ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ
ಆ ಮೂಲಕ ಬರೋಬ್ಬರಿ 6 ತಿಂಗಳ ಬಳಿಕ ವಿರೋಧ ಪಕ್ಷದ ನಾಯಕನ್ನು ಬಿಜೆಪಿ ಆಯ್ಕೆ ಮಾಡಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಸಭೆಯ ನಂತರ ಆರ್.ಅಶೋಕ್ ಹೆಸರು ಘೋಷಣೆ ಮಾಡಲಾಗಿದೆ. ಅಶೋಕ್ ಹೆಸರಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೂಚನೆ ಕೊಟ್ಟರೆ, ಶಾಸಕ ಸುನಿಲ್ ಕುಮಾರ್ ಅನುಮೋದನೆ ನೀಡಿದರು.ಬಿಜೆಪಿ ನಾಯಕರ ಸಭೆಯಲ್ಲಿ ಎಲ್ಲರೂ ಅಭಿಪ್ರಾಯ ಹೇಳಿದ್ದಾರೆ. ಯತ್ನಾಳ್ ಕೂಡ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ವೀಕ್ಷಕರ ಮುಂದೆ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳಿದ್ದಾರೆ ಎಂದು ಆಯ್ಕೆಗೂ ಮುನ್ನ ಆರ್ ಅಶೋಕ್ ಅವರು ಸುದ್ದಿಗಾರರಿಗೆ ತಿಳಿಸಿದ್ದರು.ಸಭೆಗೂ ಮುನ್ನ ಅಸಾಮಾಧಾನ ಸ್ಫೋಟಗೊಂಡಿತ್ತು. ಹಿರಿಯ ನಾಯಕರ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಹೊರ ನಡೆದಿದ್ದಾರೆ. ಹೈಕಮಾಂಡ್ ನಿಲುವು ಸ್ಪಷ್ಟವಾಗುತ್ತಿದ್ದಂತೆಯೇ ಆಮೇಲೆ ಮಾತಾಡ್ತೀವಿ ಎಂದು ಹೊರ ನಡೆದ ಯತ್ನಾಳ್‍ಗೆ ರಮೇಶ್ ಜಾರಕಿಹೊಳಿಯೂ ಸಾಥ್ ನೀಡಿದರು.ಇದಕ್ಕೂ ಮುನ್ನ ಹೈಕಮಾಂಡ್ ಸಂದೇಶ ಹೊತ್ತು ತಂದ ವೀಕ್ಷಕರ ಎದುರೇ ಶಾಸಕ ಯತ್ನಾಳ್ ಮೌನ ಮುರಿದಿದ್ದರು. ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕಕ್ಕೆ ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದ್ದರು. ಬಿಜೆಪಿ ಒಂದೇ ಕುಟುಂಬಕ್ಕೆ ಸೀಮಿತವಾಗಬಾರದು. ಬ್ಲಾಕ್‍ಮೇಲ್ ತಂತ್ರಗಳಿಗೆ ಹೈಕಮಾಂಡ್ ಮಣಿಯಬಾರದು. ಕೆಲವೇ ಚೇಲಗಳ ಮಾತು ಕೇಳಿ ಕೇಂದ್ರ ನಾಯಕರು ತೀರ್ಮಾನ ಮಾಡಬಾರದು. ನಾನು ಯಾವುದೇ ಕಾರಣಕ್ಕೂ ಕಾಂಪ್ರಮೈಸ್ ಆಗಲ್ಲ. ನನ್ನ ಖರೀದಿ ಮಾಡಲಾಗಲ್ಲ.. ಪ್ರತಿಪಕ್ಷದ ನಾಯಕ ಸ್ಥಾನ ಉತ್ತರ ಕರ್ನಾಟಕದವರಿಗೆ ಕೊಡಬೇಕು. ಉತ್ತರ ಕರ್ನಾಟಕಕ್ಕೆ ವಿಪಕ್ಷ ಸ್ಥಾನ ನೀಡದಿದ್ದರೆ ಜನ ತೀರ್ಮಾನಿಸುತ್ತಾರೆ ಎಂದು ಗುಡುಗಿದ್ದರು.
