KARNATAKA
ಬಿಟ್ ಕಾಯಿನ್ ಹಗರಣ: ಪ್ರಮುಖ ಸೂತ್ರಧಾರ ಶ್ರೀಕೃಷ್ಣ ಪರಾರಿ
ಬೆಂಗಳೂರು, ಡಿಸೆಂಬರ್ 12: ಬಿಟ್ ಕಾಯಿನ್ ಹಗರಣದ ಪ್ರಮುಖ ಸೂತ್ರಧಾರ, ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (26) ರಾಜ್ಯದಿಂದ ಪರಾರಿಯಾಗಿರುವ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ.
ಜೀವನಬಿಮಾನಗರ ಠಾಣೆಯಲ್ಲಿ ದಾಖಲಾಗಿದ್ದ ಡ್ರಗ್ಸ್ ಪ್ರಕರಣದ ಆರೋಪಿಯೂ ಆಗಿರುವ ಶ್ರೀಕೃಷ್ಣ, ನ್ಯಾಯಾಲಯದ ಜಾಮೀನು ಮೇಲೆ ಮೂರು ವಾರಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆ ಆಗಿದ್ದ. ಷರತ್ತಿನ ಪ್ರಕಾರ ತನಿಖಾಧಿಕಾರಿ ಎದುರು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಆತ ಹಾಜರಾಗದೇ ರಾಜ್ಯವನ್ನೇ ತೊರೆದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
‘ಮಾದಕ ವಸ್ತು ಸೇವಿಸಿ ಹೋಟೆಲೊಂದರ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ಶ್ರೀಕೃಷ್ಣ ಹಾಗೂ ಉದ್ಯಮಿಯೊಬ್ಬರ ಮಗ ವಿಷ್ಣು ಭಟ್‌ನನ್ನು ನವೆಂಬರ್ 5ರಂದು ಬಂಧಿಸಲಾಗಿತ್ತು. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಶ್ರೀಕೃಷ್ಣ, ಜಾಮೀನು ಪಡೆದು ಹೊರಬಂದ ನಂತರ ತಲೆಮರೆಸಿಕೊಂಡಿದ್ದಾನೆ. ಜಾಮೀನು ಷರತ್ತಿನಂತೆ ತನಿಖಾಧಿಕಾರಿ ವಿಚಾರಣೆಗೂ ಆತ ಬಂದಿಲ್ಲ. ಹೀಗಾಗಿ, ಶ್ರೀಕೃಷ್ಣನ ಜಾಮೀನು ರದ್ದುಪಡಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದೇವೆ’ ’ ಎಂದು ಮೂಲಗಳು ಹೇಳಿವೆ.
ಜೈಲಿನಿಂದ ಬಿಡುಗಡೆಯಾಗಿದ್ದ ಶ್ರೀಕೃಷ್ಣ, ತಂದೆ ರಮೇಶ್ ಅವರನ್ನು ಮೊದಲಿಗೆ ಭೇಟಿಯಾಗಿದ್ದ. ಅವರ ಜೊತೆ ಹೆಬ್ಬಾಳದ ಆಸ್ಪತ್ರೆಯೊಂದಕ್ಕೆ ತೆರಳಿದ್ದ. ಮರುದಿನದಿಂದಲೇ ಆತನ ಸುಳಿವಿಲ್ಲ ಎಂದು ಮೂಲಗಳು ಮಾಹಿತಿ ನೀಡಿವೆ. ಬಿಟ್ ಕಾಯಿನ್ ಹಗರಣದ ಸಕಲ ಮಾಹಿತಿ ಇರುವ ಶ್ರೀಕೃಷ್ಣನ ಜೀವಕ್ಕೆ ಅಪಾಯವಿರುವುದಾಗಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಇತರರು ದೂರಿದ್ದರು. ಇದೇ ಕಾರಣಕ್ಕೆ ಆತನ ಹಾಗೂ ಕುಟುಂಬಕ್ಕೆ ಭದ್ರತೆ ನೀಡಲು ಇನ್‌ಸ್ಪೆಕ್ಟರ್ ನೇತೃತ್ವದ ತಂಡವನ್ನು ನಿಯೋಜಿಸಲಾಗಿತ್ತು. ಇನ್‌ಸ್ಪೆಕ್ಟರ್ ಅವರ ಸಂಪರ್ಕಕ್ಕೂ ಶ್ರೀಕೃಷ್ಣ ಸಿಕ್ಕಿಲ್ಲ’ ಎಂದು ಮೂಲಗಳು ಹೇಳಿವೆ.