LATEST NEWS
ಶರಣ್ ಪಂಪ್ ವೆಲ್ ಗೆ ಮುಸ್ಲಿಂರ ಹಣ ಆಗುತ್ತದೆ..ಮುಸ್ಲಿಂ ಯುವಕರು ಯಾಕೆ ಆಗುವುದಿಲ್ಲ – ಬಿರುವೆರ್ ಕುಡ್ಲ

ಮಂಗಳೂರು, ನವೆಂಬರ್ 15: ಬಳ್ಳಾಲ್ ಬಾಗ್ ನಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಬಿರುವೆರ್ ಕುಡ್ಲ ಸಂಘಟನೆಯ ಹೆಸರೆತ್ತಿ ಆರೋಪ ಮಾಡಿದ ವಿಹಿಂಪ ಮುಖಂಡ ಶರಣ್ ಪಂಪ್ವೆಲ್ ವಿರುದ್ದ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಶರಣ್ ಪಂಪ್‌ವೆಲ್‌ಗೆ ಮುಸ್ಲಿಮರ ಹಣ ಆಗುತ್ತದೆ. ಆದರೆ ಮುಸ್ಲಿಂ ಯುವಕರು ಯಾಕೆ ಆಗುವುದಿಲ್ಲ ಎಂದು ಬಿರುವೆರ್ ಕುಡ್ಲ ಮಂಗಳೂರು ಪ್ರಶ್ನಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿರುವೆರ್ ಕುಡ್ಲದ ಸಂಚಾಲಕ ಲಕ್ಷ್ಮೀಶ್ ಬಳ್ಳಾಲ್ ಬಾಗ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಶರಣ್ ಪಂಪ್‌ವೆಲ್ ಬಿರುವೆರ್ ಕುಡ್ಲ ಒಂದು ಜಾತಿಗೆ ಸೀಮಿತವಾಗಿದೆ ಎಂದಿದ್ದರು. ಬಿರುವೆರ್ ಕುಡ್ಲ ಸಮಾಜ ಸೇವೆಗಾಗಿ ಹುಟ್ಟಿಕೊಂಡ ಸಂಸ್ಥೆಯಾಗಿದೆ. ಏಳು ವರ್ಷಗಳಿಂದ ಸಂಸ್ಥೆಯು ಬಡವರಿಗೆ ಜಾತಿ ಭೇದ ನೋಡದೆ ಮೂರೂವರೆ ಕೋಟಿ ರೂ.ಗಳ ಸಹಾಯ ಮಾಡಿದೆ ಎಂದರು.

ಬಿರುವೆರ್ ಕುಡ್ಲದ ದೀಪು ಶೆಟ್ಟಿಗಾರ್ ಮಾತನಾಡಿ ಶರಣ್ ಪಂಪ್‌ವೆಲ್ ಸಿಟಿ ಸೆಂಟರ್ ಸಹಿತ ಹಲವು ಮುಸ್ಲಿಮರ ಕೇಂದ್ರಗಳಿಂದ ಗುತ್ತಿಗೆ ಹಿಡಿದು ಸಾಕಷ್ಟು ಹಣ ಸಂಪಾದಿಸುತ್ತಿದ್ದಾರೆ. ಹಿಂದುತ್ವದ ಹೆಸರಿನಲ್ಲಿ ಹೋರಾಟ ಮಾಡುವ ಅವರಿಗೆ ಮುಸ್ಲಿಮರ ಸಂಸ್ಥೆಯ ಹಣವಾಗುತ್ತದೆ, ಆದರೆ ಮುಸ್ಲಿಂ ಯುವಕರು ಬೇಡವಾಗಿದೆ. ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ನಾವು ಹೆಣ ಹೊರುವುದರಿಂದ ಹಿಡಿದು ಮನೆ ಕಟ್ಟಿ ಕೊಡುವವರೆಗೆ ಸಮಾಜ ಸೇವೆ ಮಾಡುತ್ತಿದ್ದೇವೆ. ಬಲ್ಲಾಳ್ ಬಾಗ್‌ನಲ್ಲಿ ಬಿರುವೆರ್ ಕುಡ್ಲ ಜನಪರ ಕೆಲಸ ಮಾಡಿದೆಯೇ ವಿನಃ ಶರಣ್ ಪಂಪ್‌ವೆಲ್‌ರಂತೆ ಸಮಾಜ ಒಡೆಯುವ ಕೆಲಸ ಮಾಡಿಲ್ಲ ಎಂದರು.
ರಾಜ್ಯ ಹಾಗೂ ಹೊರ ರಾಜ್ಯಗಳನ್ನು ಸೇರಿಸಿ ಒಟ್ಟು 27 ಘಟಕಗಳಿದ್ದು, ನಾರಾಯಣ ಗುರು ಧ್ಯೇಯದಂತೆ ಒಂದೇ ಮತ, ಒಂದೇ ಜಾತಿ ಅನ್ನುವ ದೃಷ್ಟಿ ಇರಿಸಿ ಕೆಲಸ ಮಾಡು ತ್ತೇವೆ. 20 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು, ಸದಸ್ಯರು ಇದ್ದಾರೆ. ನಿಮ್ಮ ಒಳ್ಳೆಯ ಕೆಲಸದ ಬಗ್ಗೆ ಅಭಿಮಾನ ಇದೆ, ನೀವು ನಮಗೆ ಧರ್ಮದ ಹೆಸರಲ್ಲಿ ಪಾಠ ಹೇಳಿಕೊಡುವ ಅಗತ್ಯವಿಲ್ಲ. ನಿಮ್ಮ ವೈಯಕ್ತಿಕ ವಿಚಾರಗಳನ್ನೆಲ್ಲ ನಾವು ಮುಂದಿಟ್ಟರೆ ನಿಮ್ಮ ಜೊತೆಗೇ ಕಾರ್ಯಕರ್ತರು ಬರಲಿಕ್ಕಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ. ಅದಕ್ಕೆ ಆಸ್ಪದ ಕೊಡಬೇಡಿ ಎಂದು ದೀಪು ಶೆಟ್ಟಿಗಾರ್ ಆಕ್ರೋಶ ವ್ಯಕ್ತಪಡಿಸಿದರು.