KARNATAKA
ಕೇರಳದಲ್ಲಿ ಮತ್ತೆ ಕಾಣಿಸಿಕೊಂಡ ಹಕ್ಕಿ ಜ್ವರ, ಹೈ ಅಲರ್ಟ್ ಘೋಷಣೆ..!
ಕೇರಳ : ಕೇರಳದಲ್ಲಿ ಮತ್ತೆ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಕೇರಳದ ಅಲಪ್ಪುಳದಲ್ಲಿ ಹಕ್ಕಿಜ್ವರದ ಆತಂಕ ಎದುರಾಗಿದ್ದು, ಅಲಪ್ಪುಳ ಜಿಲ್ಲೆಯ ಎಡತ್ವ ಗ್ರಾಮ ಪಂಚಾಯಿತಿಯ ವಾರ್ಡ್ 1 ಮತ್ತು ಚೆರುತನ ಗ್ರಾಮ ಪಂಚಾಯಿತಿಯ ವಾರ್ಡ್ 3ರಲ್ಲಿ ಸಾಕಿರುವ ಬಾತುಕೋಳಿಗಳಲ್ಲಿ ಈ ಹಕ್ಕಿ ಜ್ವರ ದೃಢಪಟ್ಟಿದೆ.
ಹಕ್ಕಿ ಜ್ವರ ಬಂದಿರುವ ಬಗ್ಗೆ ಅಲ್ಲಿ ಆರೋಗ್ಯಾಧಿಕಾರಿಗಳು ಧೃಡೀಕರಿಸಿದ್ದಾರೆ. ಹಕ್ಕಿ ಜ್ವರದ ಲಕ್ಷಣಗಳು ಕಂಡು ಬಂದ ಹಿನ್ನಲೆ ಮಾದರಿಗಳನ್ನು ಪರೀಕ್ಷೆಗಾಗಿ ಭೋಪಾಲ್‌ನ ಲ್ಯಾಬ್‌ಗೆ ಕಳುಹಿಸಿದಾಗ ಅದರಿಂದ ಬಂದ ವರದಿಯಲ್ಲಿ ಏವಿಯನ್ ಇನ್ಫ್ಲುಯೆನ್ಸ್ (H5N1) ರೋಗ ಇರುವುದು ದೃಢಪಟ್ಟಿದೆ. ವಿಚಾರ ತಿಳಿದ ಕೂಡಲೇ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ರ್‍ಯಾಪಿಡ್ ಆಕ್ಷನ್ ಫೋರ್ಸ್ ತಂಡವನ್ನು ರಚಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಿದೆ.
ಈಗಾಗಲೇ ಈ ತಂಡ ಕಾರ್ಯಾಚರಣೆ ನಡೆಸಿದ್ದು ಸೋಂಕು ಕಂಡುಬಂದ ಪ್ರದೇಶಗಳ ಸುತ್ತ ಕಟ್ಟೆಚ್ಚರ ವಹಿಸಿದೆ. ಸೋಂಕು ಉಲ್ಬಣಿಸದಂತೆ ಸೋಂಕಿತ ಪ್ರದೇಶಗಳ ಸುತ್ತಮುತ್ತಲ ಪ್ರದೇಶವನ್ನು ‘ರೋಗಪೀಡಿತ ವಲಯ’ ಘೋಷಣೆ ಮಾಡಿ ರಾಸಾಯನಿಕಗಳನ್ನು ಸಿಂಪಡಿಸಿ ಮುನ್ನೆಚ್ಚರಿಕೆ ವಹಿಸಿದೆ.ಅಲ್ಲದೆ ಈ ಪ್ರದೇಶಗಳಲ್ಲಿರುವ ಕೋಳಿಗಳು ಮತ್ತು ಬಾತುಕೋಳಿ, ಇತರೆ ಪಕ್ಷಿಗಳನ್ನೂ ಕೂಡ ಪರೀಕ್ಷೆಗೊಳಪಡಿಸಲಾಗುತ್ತದೆ.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ಕೂಡ ನಡೆದಿದ್ದು, ಸಭೆಯಲ್ಲಿ ಸೋಂಕು ಪತ್ತೆಯಾದ ಕೇಂದ್ರದಿಂದ ಒಂದು ಕಿಲೋಮೀಟರ್ ವ್ಯಾಪ್ತಿಯೊಳಗೆ ಎಲ್ಲ ದೇಶೀಯ ಪಕ್ಷಿಗಳನ್ನು ಕೊಂದು ನಾಶಪಡಿಸುವ (ಕೊಲ್ಲುವ) ಪ್ರಕ್ರಿಯೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಅಂದಹಾಗೆ ಈ ಹಕ್ಕಿ ಜ್ವರ ಮನುಷ್ಯರಿಗೆ ರೋಗ ಹರಡುವ ಸಾಧ್ಯತೆ ಕಡಿಮೆ ಇರುವುದರಿಂದ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.