LATEST NEWS
ಆಸ್ಟತ್ರೆ ದುಬಾರಿ ಬಿಲ್,ವೈದ್ಯರ ನಿರ್ಲಕ್ಷ್ಯಕ್ಕೆ ಮೂಗುದಾರ

ಆಸ್ಟತ್ರೆ ದುಬಾರಿ ಬಿಲ್,ವೈದ್ಯರ ನಿರ್ಲಕ್ಷ್ಯಕ್ಕೆ ಮೂಗುದಾರ:ದೂರು ಸ್ವೀಕಾರಕ್ಕೆ ಮೆಡಿಕಲ್ ಬೋರ್ಡ್ ರಚನೆ
ಮಂಗಳೂರು ಅಕ್ಟೋಬರ್ 05 :ಆಸ್ಟತ್ರೆ ದುಬಾರಿ ಬಿಲ್,ವೈದ್ಯರ ನಿರ್ಲಕ್ಷ್ಯಕ್ಕೆ ಸರ್ಕಾರ ಮೂಗುದಾರ ಹಾಕಿದೆ. ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವಿಧಿಸುವ ದುಬಾರಿ ಚಿಕಿತ್ಸಾ ದರ ಹಾಗೂ ವೈದ್ಯಕೀಯ ಚಿಕಿತ್ಸೆಯಲ್ಲಿ ವೈದ್ಯರ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರ ದೂರು ಅಹವಾಲುಗಳನ್ನು ಆಲಿಸಲು ದ.ಕ. ಜಿಲ್ಲೆಯಲ್ಲಿ ವೈದ್ಯಕೀಯ ಮಂಡಳಿ ಅಸ್ತಿತ್ವಕ್ಕೆ ಬಂದಿದೆ.

ದೂರು ಸ್ವೀಕಾರಕ್ಕೆ ಮೆಡಿಕಲ್ ಬೋರ್ಡ್ ರಚನೆ
ಜಿಲ್ಲೆಯ ಹಿರಿಯ ವೈದ್ಯರು, ಐಎಂಎ ಜಿಲ್ಲಾ ಅಧ್ಯಕ್ಷರು ಕಾರ್ಯದರ್ಶಿಗಳ ಜೊತೆ ಚರ್ಚಿಸಿ, ಜಿಲ್ಲಾಮಟ್ಟದಲ್ಲಿ ವೈದ್ಯಕೀಯ ಮಂಡಳಿ ರಚಿಸಲಾಗಿರುತ್ತದೆ. ಈ ಸಮಿತಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಐಎಂಎ ಜಿಲ್ಲಾ ಅಧ್ಯಕ್ಷರು, ಸ್ತ್ರೀರೋಗ, ಮಕ್ಕಳ ಸೇರಿದಂತೆ ವಿವಿಧ ವೈದ್ಯಕೀಯ ಸಂಘಟನೆಗಳ ಅಧ್ಯಕ್ಷರು, ಹಾಗೂ ಜಿಲ್ಲೆಯ ಐದು ತಾಲೂಕಿನ ತಾಲೂಕು ಆರೋಗ್ಯಾಧಿಕಾರಿಯವರನ್ನು ಒಳಗೊಂಡಂತೆ ಸಮಿತಿಯನ್ನು ರಚಿಸಲಾಗಿರುತ್ತದೆ.
ಸಮಿತಿಯು ವೈದ್ಯಕೀಯ ನಿರ್ಲಕ್ಷ್ಯತೆ/ದುಬಾರಿ ಚಿಕಿತ್ಸಾ ವೆಚ್ಚದ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಕೂಲಂಕುಷವಾಗಿ ಪರಿಶೀಲನೆ/ವಿಚಾರಣೆ ನಡೆಸಿ ಸಂಪೂರ್ಣ ವರದಿಯನ್ನು ಜಿಲ್ಲಾಧಿಕಾರಿಯವರಿಗೆ ಒಪ್ಪಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಾರ್ವಜನಿಕರು ಯಾವುದೇ ದೂರುಗಳು ಇದ್ದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ದ.ಕ. ಮಂಗಳೂರು (ದೂರವಾಣಿ ಸಂಖ್ಯೆ: 0824-2423672), ಅಥವಾ ಐಎಂಎ ಜಿಲ್ಲಾ ಅಧ್ಯಕ್ಷರಿಗೆ (ದೂರವಾಣಿ ಸಂಖ್ಯೆ: 0824-4251578) ಲಿಖಿತವಾಗಿ ದೂರು ಸಲ್ಲಿಸಲು ಅವಕಾಶವಿರುತ್ತದೆ.
ಯಾವುದೇ ವ್ಯಕ್ತಿಯು ವೈದ್ಯರು ಅಥವಾ ಶುಶ್ರೂಷ ಸಿಬ್ಬಂದಿಗಳ ವಿರುದ್ಧ ಹಲ್ಲೆಯನ್ನು ನಡೆಸಬಾರದು. ಒಂದು ವೇಳೆ ಸಾರ್ವಜನಿಕರು ಹಲ್ಲೆ ನಡೆಸಿದ ಕುರಿತು ದೂರುಗಳು ದಾಖಲಾದಲ್ಲಿ ಅಂತಹವರ ವಿರುದ್ಧ ಕಾನೂನು ಪ್ರಕಾರ ಕ್ರಮವನ್ನು ಜರುಗಿಸಲಾಗುವುದು.
ವೈದ್ಯ ಹಾಗೂ ಶುಶ್ರೂಷ ಸಿಬ್ಬಂದಿಗಳ ಮೇಲೆ ರೋಗಿಯ ಕಡೆಯವರು ಯಾವುದೇ ರೀತಿಯ ಹಿಂಸಾತ್ಮಕ ದೌರ್ಜನ್ಯ/ದೈಹಿಕ ಹಲ್ಲೆಗಳು ನಡೆಸಲು ಮುಂದಾದಲ್ಲಿ ಆಯಾಯ ವ್ಯಾಪ್ತಿಯ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ತಹಶೀಲ್ದಾರರು ಘಟನಾ ಸ್ಥಳಕ್ಕೆ ಕೂಡಲೇ ಭೇಟಿ ನೀಡಿ, ತನಿಖೆ ನಡೆಸಿ ಸೂಕ್ತವಾದ ಕ್ರಮವನ್ನು ಕೈಗೊಳ್ಳುವುದು. ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಳು ಹೇಳಿದ್ದಾರೆ.
Continue Reading