LATEST NEWS
ಬಿಕರ್ನಕಟ್ಟೆ ಅಪಘಾತ – ಮೆದುಳು ನಿಷ್ಕ್ರೀಯಗೊಂಡಿದ್ದ ಧೀರಜ್ ಅಂಗಾಂಗ ದಾನಕ್ಕೆ ಕುಟುಂಬ ನಿರ್ಧಾರ

ಮಂಗಳೂರು ಮೇ 31: ಬಿಕರ್ನಕಟ್ಟೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಧೀರಜ್ ಅವರ ಮೆದುಳು ನಿಷ್ಕ್ರೀಯಗೊಂಡಿದ್ದು, ಅಂಗಾಂಗ ದಾನ ಮಾಡುವುದಾಗಿ ಮೃತರ ಸಂಬಂಧಿಕರು ಮಾಹಿತಿ ನೀಡಿದ್ದಾರೆ.
ಮೇ 29 ಭಾನುವಾರ ಮುಂಜಾನೆ ಬಿಕರ್ನಕಟ್ಟೆಯಲ್ಲಿ ಗಣೇಶ್ ಮತ್ತು ಧೀರಜ್ ಸಂಚರಿಸುತಿದ್ದ ಬೈಕ್ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್ ನಿಂದ ರಸ್ತೆಗೆ ಬಿದ್ದ ಗಣೇಶ್ ಹಾಗೂ ಧೀರಜ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದರು.
ಇನ್ನು ನಸುಕಿನ ಜಾವ 2:30ರ ವೇಳೆಗೆ ಸೆಂಟ್ರಲ್ ರೈಲ್ವೇ ಸ್ಟೇಷನ್ ಗೆ ಬಾಡಿಗೆಗೆಂದು ತೆರಳುವ ಆಟೋ ಚಾಲಕ ಪ್ರವೀಣ್ ಕುಮಾರ್ ಇದನ್ನು ಗಮನಿಸಿ ಸಾರ್ವಜನಿಕರ ಸಹಾಯದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದೀಗ ಧೀರಜ್ ಅವರ ಮೆದುಳು ನಿಷ್ಕ್ರೀಯವಾಗಿದೆ ಎಂದು ವೈದ್ಯರು ತಿಳಿಸಿದ ಹಿನ್ನಲೆ ಅವರ ಕುಟುಂಬ ಅಂಗಾಂಗ ದಾನ ಮಾಡುವುದಾಗಿ ನಿರ್ಧರಿಸಿದೆ. ಚೆನ್ನೈನ ತಂಡ ಖಾಸಗಿ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿ ಅಂಗಾಂಗಗಳನ್ನು ಕೊಂಡೊಯ್ಯಲಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.