FILM
ಮತ್ತೆ ಬಿಗ್ ಬಾಸ್ ಸೀಸನ್ ನಿರೂಪಣೆ ಮಾಡಲಿರುವ ಕಿಚ್ಚ ಸುದೀಪ್

ಬೆಂಗಳೂರು ಜೂನ್ 30: ತಾನು ಇನ್ನು ಮುಂದೆ ಬಿಗ್ ಬಾಸ್ ಸೀಸನ್ ನಿರೂಪಣೆ ಮಾಡುವುದಿಲ್ಲ ಎಂದು ಕೊನೆಯ ಬಿಗ್ ಬಾಸ್ ನಲ್ಲಿ ಘೋಷಣೆ ಮಾಡಿದ್ದ ಕಿಚ್ಚ ಸುದೀಪ್ ಇದೀಗ ಮತ್ತೆ ಬಿಗ್ ಬಾಸ್ ನಿರೂಪಣೆಗೆ ಒಪ್ಪಿಕೊಂಡಿದ್ದಾರೆ. ಇದರೊಂದಿಗೆ ಬಿಗ್ ಬಾಸ್ ಸೀಸನ್ 12 ಸುದೀಪ್ ನಿರೂಪಣೆಯಲ್ಲೇ ಬರಲಿದೆ.
ಕಳೆದ ಬಿಗ್ ಬಾಸ್ ಸೀಸನ್ 11 ರಲ್ಲಿ ನಾನು ಇನ್ನು ಮುಂದೆ ಬಿಗ್ ಬಾಸ್ ಸೀಸನ್ ಹೋಸ್ಟ್ ಮಾಡುವುದಿಲ್ಲ ಎಂದು ಹೇಳಿದ್ದರು. ಆ ಸುದ್ದಿ ಕೇಳಿ ಅಭಿಮಾನಿಗಳಿಗೆ ಬೇಸರ ಆಗಿತ್ತು. ಸುದೀಪ್ ಇಲ್ಲ ಎಂದರೆ ಬಿಗ್ ಬಾಸ್ ಕಾರ್ಯಕ್ರಮವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವೀಕ್ಷಕರು ಹೇಳಿದ್ದರು. ಈಗ ಕಿಚ್ಚ ಸುದೀಪ್ ಅವರು ತಮ್ಮ ನಿರ್ಧಾರ ಬದಲಿಸಿದ್ದಾರೆ. ಮತ್ತೆ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡಲು ಒಪ್ಪಿಕೊಂಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಕೂಡ ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲೇ ಮುಂದುವರಿಯಲಿದೆ. ಈ ಕುರಿತು ‘ಕಲರ್ಸ್ ಕನ್ನಡ’ ವಾಹಿನಿ ಘೋಷಣೆ ಮಾಡಿದೆ. ಇನ್ನು ನಾಲ್ಕು ಸೀಸನ್ ಸುದೀಪ್ ಅವರೇ ನಡೆಸಿ ಕೊಡುತ್ತಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ ಯಾವಾಗಿನಿಂದ ಪ್ರಸಾರ ಆಗಲಿದೆ ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಆ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು ಎಂದು ‘ಕಲರ್ಸ್ ಕನ್ನಡ’ ತಿಳಿಸಿದೆ. ಯಾವೆಲ್ಲ ಸ್ಪರ್ಧಿಗಳು ಬರುತ್ತಾರೆ ಎಂಬ ಲೆಕ್ಕಾಚಾರ ಈಗಲೇ ಶುರುವಾಗಿದೆ.