Connect with us

    UDUPI

    ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ನಿವೇಶನ ಹಂಚಿಕೆ – ಮೋಸ ಹೋಗಬೇಡಿ

    ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ನಿವೇಶನ ಹಂಚಿಕೆ-ಮೋಸ ಹೋಗಬೇಡಿ

    ಉಡುಪಿ, ಅಕ್ಟೋಬರ್ 07 :ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ನಿವೇಶನ ಹಂಚುವ ಸಲುವಾಗಿ ಹೆರ್ಗ ಗ್ರಾಮ ಮತ್ತು ಶಿವಳ್ಳಿ ಗ್ರಾಮದಲ್ಲಿ ಒಟ್ಟು 11 ಎಕ್ರೆ ನಿವೇಶನ ಗುರುತಿಸಿದ್ದು, ಈಗಾಗಲೇ ನಗರಸಭೆಯಲ್ಲಿ ಅರ್ಜಿ ಸಲ್ಲಿಸಿರುವವರಲ್ಲಿ 670 ಮಂದಿಯನ್ನು ಪ್ರಥಮ ಹಂತದ ಪಟ್ಟಿಯಲ್ಲಿ ಆಯ್ಕೆ ಮಾಡಲಾಗಿರುತ್ತದೆ.

    ರಾಜ್ಯ ಮೀನುಗಾರಿಕಾ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಇವರ ಮುತುವರ್ಜಿಯಲ್ಲಿ ಈಗಾಗಲೇ ಸ್ಥಳವನ್ನು ಸಮತಟ್ಟುಗೊಳಿಸುವ ಹಾಗೂ ಪ್ರತ್ಯೇಕ ನಿವೇಶನವಾಗಿ ಪರಿವರ್ತಿಸುವ ಕಾರ್ಯ ನಡೆಯುತ್ತಿದೆ. ನವೆಂಬರ್ 2017ರ ಅಂತ್ಯದೊಳಗೆ ನಿವೇಶನವನ್ನು ಉಸ್ತುವಾರಿ ಸಚಿವರು ಹಂಚಿಕೆ ಮಾಡಲಿರುವರು.

    ಆದುದರಿಂದ ಈ ಬಗ್ಗೆ ಉಡುಪಿ ನಗರಸಭೆಯಿಂದ ಯಾವುದೇ ಸಭೆ ಅಥವಾ ಚರ್ಚೆಗೆ ದಿನ ನಿಗದಿಪಡಿಸಿರುವುದಿಲ್ಲ ಹಾಗೂ ಯಾವುದೇ ಅರ್ಜಿದಾರರೊಂದಿಗೆ ನಿವೇಶನ ಹಂಚಿಕೆ ಮಾಡುವ ಹಾಗೂ ದಾಖಲೆಪತ್ರಗಳನ್ನು ಸಲ್ಲಿಸುವ ಬಗ್ಗೆ ಸಭೆ ಕರೆದಿರುವುದಿಲ್ಲ ಹಾಗೂ ಪತ್ರ ವ್ಯವಹಾರ ಮಾಡಿರುವುದಿಲ್ಲ.

    ನಗರಸಭೆಯ ಗಮನಕ್ಕೆ ಬಂದಿರುವಂತೆ ನಿವೇಶನಕ್ಕೆ ಅರ್ಜಿ ಸಲ್ಲಿಸಿದವರಿಗೆ ಯಾರೋ ಮೂರನೇ ವ್ಯಕ್ತಿ ನಿವೇಶನ ಹಂಚಿಕೆಯ ಕುರಿತು ಪತ್ರ ಮುಖೇನ ಸಭೆಗೆ ಹಾಜರಾಗಲು ತಿಳಿಸಿರುವರು. ಆದುದರಿಂದ ಇಂತಹ ಸಭೆಯಲ್ಲಿ ಅರ್ಜಿದಾರರು ಭಾಗವಹಿಸಿ ಯಾವುದೇ ಹಣ ಹಾಗೂ ಇತರೆ ದಾಖಲೆಗಳನ್ನು ನೀಡಿ ಮೋಸ ಹೋಗಬಾರದಾಗಿ ವಿನಂತಿ. ಹಾಗೂ ಇಂತಹ ಘಟನೆಗಳು ಸಂಭವಿಸಿದಲ್ಲಿ ನಗರಸಭೆಯು ಹೊಣೆಯಾಗಿರುವುದಿಲ್ಲ. ಈ ರೀತಿಯ ಮೋಸ ಮಾಡುವವರು ಕಂಡು ಬಂದಲ್ಲಿ ನಗರಸಭೆಯಿಂದ ಕಾನೂನು ರೀತಿಯ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

    Share Information
    Advertisement
    Click to comment

    You must be logged in to post a comment Login

    Leave a Reply