Connect with us

KARNATAKA

ಅಡಿಕೆ ವ್ಯಾಪಾರಿಯ ಸುಲಿಗೆ ಮಾಡಿದ ನಾಲ್ವರ ಚರ್ಮ ಸುಲಿದ ಬೆಂಗಳೂರು ಪೊಲೀಸರು..!

ಬೆಂಗಳೂರು: ಗಮನ ಬೇರೆಡೆ ಸೆಳೆದು ಅಡಕೆ ವ್ಯಾಪಾರಿಯ ಕಾರಲ್ಲಿದ್ದ 1 ಕೋಟಿ ರೂ ಹಣ ಕಳವು ಮಾಡಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರಿನ ಉಪ್ಪಾರಪೇಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಸ್ವಾಮಿ (34), ಅನುಪಮಾ (38), ಪವನ್ (30) ಹಾಗೂ ಕಾರ್ತಿಕ್ (27) ಬಂಧಿತ ಆರೋಪಿಗಳಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರ ಮೂಲದ ಉಮೇಶ್ ವಿವಿಧ ಜಿಲ್ಲೆಗಳ ರೈತರಿಂದ ಅಡಿಕೆ ಖರೀದಿಸಿ, ಹೊರ ರಾಜ್ಯಗಳಿಗೆ ರಫ್ತು ಮಾಡುವ ಕೆಲಸ ಮಾಡಿಕೊಂಡಿದ್ದರು. ಅಕ್ಟೋಬರ್ 7ರಂದು ಬೆಂಗಳೂರಿಗೆ ಬಂದಿದ್ದ ಉಮೇಶ್ ಕಾರಿನಲ್ಲಿದ್ದ 1 ಕೋಟಿ ಕಳ್ಳತನವಾಗಿತ್ತು. ಈ ಸಂಬಂಧ ಕಾರು ಚಾಲಕ ಸ್ವಾಮಿಯ ಮೇಲೆ ಅನುಮಾನ ವ್ಯಕ್ತಪಡಿಸಿ ಅಕ್ಟೋಬರ್ 21ರಂದು ಉಪ್ಪಾರಪೇಟೆ ಠಾಣೆಗೆ ಉಮೇಶ್ ದೂರು ನೀಡಿದ್ದರು. ಅಕ್ಟೋಬರ್ 7ರಂದು ಅಡಿಕೆ ಖರೀದಿಸಲು ಅಪಾರ ಪ್ರಮಾಣದ ಹಣದೊಂದಿಗೆ ಉಮೇಶ್, ತಮ್ಮ ಕಾರು ಚಾಲಕ ಸ್ವಾಮಿ ಜೊತೆ ಚಿತ್ರದುರ್ಗದಿಂದ ಹೊರಟಿದ್ದರು. ಕಾರಿನ ಡಿಕ್ಕಿಯಲ್ಲಿ ಹಣದ ಬ್ಯಾಗ್ ಇರಿಸಿದ್ದರು. ತುಮಕೂರಿನಲ್ಲಿ ಅಡಿಕೆ ಸಿಕ್ಕಿರಲಿಲ್ಲ.

ಆದ್ದರಿಂದ ಬೆಂಗಳೂರಿನ ಚಂದ್ರಾಲೇಔಟ್‌ನ ಪಿಜಿಯಲ್ಲಿದ್ದ ಮಗಳನ್ನು ಮಾತನಾಡಿಸಿಕೊಂಡು ಹೋಗೋಣವೆಂದು ಬೆಂಗಳೂರಿಗೆ ಬಂದಿದ್ದರು.ಅಪರಾಹ್ನ 2 ಗಂಟೆಗೆ ಗಾಂಧಿನಗರದ ಕಾಳಿದಾಸ ರಸ್ತೆಯಲ್ಲಿರುವ ಗಿರಿಯಾಸ್ ಬಳಿ ಕಾರು ನಿಲ್ಲಿಸಿದ್ದ ಉಮೇಶ್ ಹಾಗೂ ಸ್ವಾಮಿ, ಸಮೀಪದಲ್ಲಿದ್ದ ಹೋಟೆಲ್‌ನಲ್ಲಿ ಊಟ ಮಾಡಿಕೊಂಡು ಬಂದು ಚಂದ್ರಾಲೇಔಟ್‌ಗೆ ತೆರಳಿ ಮಗಳನ್ನು ಮಾತನಾಡಿಸಿಕೊಂಡು ಚಿತ್ರದುರ್ಗಕ್ಕೆ ಹೊರಟಿದ್ದರು. ನಂತರ ಚಹಾ ಕುಡಿಯಲು ಚಾಲಕ ಸ್ವಾಮಿ, ಡಾಬಸ್‌ಪೇಟೆ ಬಳಿ ಕೆಲ ನಿಮಿಷ ಕಾರು ನಿಲ್ಲಿಸಿದ್ದ. ಬಳಿಕ ಇಬ್ಬರೂ ಸಹ ಕಾರಿನಲ್ಲಿ ಭೀಮಸಮುದ್ರಕ್ಕೆ ಹೋಗಿ ನೋಡಿದಾಗ ಹಣದ ಬ್ಯಾಗ್ ನಾಪತ್ತೆಯಾಗಿತ್ತು. ಸಾಕಷ್ಟು ಹುಡುಕಾಟದ ನಂತರವೂ ಬ್ಯಾಗ್ ಸಿಗದಿದ್ದಾಗ ತಮ್ಮ ಸ್ನೇಹಿತನೊಂದಿಗೆ ಚರ್ಚಿಸಿದ ಬಳಿಕ ಉಪ್ಪಾರಪೇಟೆ ಠಾಣೆಗೆ ಬಂದು ಉಮೇಶ್ ದೂರು ನೀಡಿದ್ದರು. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಉಮೇಶ್ ಕಾರು ಡ್ರೈವರ್ ಸ್ವಾಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ಸಂಚು ರೂಪಿಸಿ ನಗರದ ಹೊರವಲಯದಲ್ಲಿ ಹಣ ಕಳ್ಳತನ ಮಾಡಿರುವುದು ತಿಳಿದುಬಂದಿದೆ. ಸದ್ಯ ನಾಲ್ವರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 90.19 ಲಕ್ಷ ರೂ ನಗದು, ಕದ್ದ ಹಣದಲ್ಲಿ ಖರೀದಿಸಿದ್ದ 6.49 ಲಕ್ಷ ಮೌಲ್ಯದ 2 ಆ್ಯಪಲ್ ಐಫೋನ್‌ಗಳು, 1 ಇಯರ್ ಫೋನ್, 2 ವಾಚುಗಳು, 1 ಸ್ಮಾರ್ಟ್ ವಾಚ್, 61.670 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ 2 ಕಾರುಗಳು, 1 ಬೈಕ್, 4 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *