KARNATAKA
ಬೆಂಗಳೂರು – ಉದ್ಯಾನ್ ಎಕ್ಸಪ್ರೇಸ್ ರೈಲಿನಲ್ಲಿ ಬೆಂಕಿ ಅನಾಹುತ…!!

ಬೆಂಗಳೂರು ಅಗಸ್ಟ್ 19: ನಿಂತಿದ್ದ ಉದ್ಯಾನ್ ಎಕ್ಸ್ ಪ್ರೇಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಮೆಜೆಸ್ಟಿಕ್ ಬಳಿಯ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ತಾಂತ್ರಿಕ ಸಮಸ್ಯೆಯಿಂದ ರೈಲ್ವೆ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಬೆಂಕಿ ರೈಲಿನ ಎರಡು ಕೋಚ್ಗಳಿಗೆ ಆವರಿಸಿದೆ.
ಉದ್ಯಾನ್ ಎಕ್ಸಪ್ರೇಸ್ ರೈಲು ಪ್ಲ್ಯಾಟ್ ಫಾರ್ಮ್ ನಂಬರ್ 3 ರಲ್ಲಿ ಮುಂಜಾನೆ ಬಂದಿದ್ದು, ಬೆಳಿಗ್ಗೆ 7 ಗಂಟೆ ಸಮಯ ರೈಲಿನ B1 ಮತ್ತು B2 ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ರೈಲಿನೊಳಗೆ ಯಾವುದೇ ಪ್ರಯಾಣಿಕರು ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುತ್ತಿದ್ದಾರೆ.

ಅದೃಷ್ಟವಶಾತ್ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ. ಸುತ್ತಮುತ್ತಲ ರೈಲುಗಳಿಗೂ ಯಾವುದೇ ಹಾನಿಯುಂಟಾಗಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಘಟನಾ ಸ್ಥಳಕ್ಕೆ ರೈಲ್ವೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.