KARNATAKA
ಬೆಂಗಳೂರಿನ ಗಲ್ಲಿಗಳಲ್ಲಿ ಪೇ ಸಿಎಂ ಪೋಸ್ಟರ್..ಕಾಂಗ್ರೇಸ್ ಅಭಿಯಾನಕ್ಕೆ ದಂಗಾದ ಬಿಜೆಪಿ…!!
ಬೆಂಗಳೂರು ಸೆಪ್ಟೆಂಬರ್ 21 : ರಾಜ್ಯ ಸರಕಾರದ ವಿರುದ್ದ ಕಾಂಗ್ರೇಸ್ ಇದೀಗ ವಿಭಿನ್ನ ರೀತಿಯ ಅಭಿಯಾನಗಳಿಗೆ ಕೈ ಹಾಕಿದ್ದು, ಬಿಜೆಪಿಗರ ನಿದ್ದೆಗೆಡೆಸಿದೆ. 40 % ಕಮಿಷನ್ ಆರೋಪ ಮುಂದಿಟ್ಟುಕೊಂಡ ಪೇಟಿಎಂ ಸ್ಕ್ಯಾನ್ಕ ಕೋಡ್ ರೀತಿಯಲ್ಲೇ ಪೇ ಸಿಎಂ ಕ್ಯೂರ್ ಕೋಡ್ ಇರುವ ಪೋಸ್ಟರ್ ಬೆಂಗಳೂರಿನ ಗಲ್ಲಿಗಳಲ್ಲಿ ಹಾಕಲಾಗಿದೆ.
ಬೆಂಗಳೂರು ನಗರದ ವಿವಿಧೆಡೆ ಮುಖ್ಯಮಂತ್ರಿ ಚಿತ್ರ ಸಹಿತ ಈ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ರಾಜ್ಯ ಸರ್ಕಾರದ ವಿರುದ್ಧದ ದೂರುಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಘಟಕ ಇತ್ತೀಚೆಗೆ ಬಿಡುಗಡೆ ಮಾಡಿದ ‘ಶೇ 40 ಕಮಿಷನ್ ಸರ್ಕಾರ’ ವೆಬ್ ಸೈಟ್ ತೆರೆದುಕೊಳ್ಳಲಿದೆ.
ನಗರದ ಜಯಮಹಲ್ ರಸ್ತೆ, ಇಂಡಿಯನ್ ಎಕ್ಷ್‌ಪ್ರೆಸ್ ಬಳಿ ಗೋಡೆಗೆ ಪೇ ಸಿಎಂ ಎಂದು ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರವಿರುವ ಪೋಸ್ಟರ್ ಅಂಟಿಸುವ ಮೂಲಕ ಭ್ರಷ್ಟ ಸರ್ಕಾರ ಎಂದು ಅಣಕಿಸಲಾಗಿದೆ. 40% accepted here ಎಂದು ಪೋಸ್ಟರ್‌ನಲ್ಲಿ ಒಕ್ಕಣೆ ಬರೆಯಲಾಗಿದೆ. ಪೇಟಿಎಂ ಮಾದರಿಯಲ್ಲಿ ಪೇ ಸಿಎಂ ಎಂದು ಕ್ಯೂಆರ್ ಕೋಡ್ ಮೇಲೆ ಸಿಎಂ ಬಸವರಾಜ ಬೊಮ್ಮಾಯಿ ಫೋಟೋ ಹಾಕಲಾಗಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪದ ದೂರು ನೀಡಲು ಸಹಾಯವಾಣಿ ನಂಬರ್ ಹಾಕಿರುವ ಪೋಸ್ಟರ್‌ನ್ನು ಬೆಂಗಳೂರಿನ ಹಲವೆಡೆ ಅಂಟಿಸಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸದ ಬಳಿಯೂ ಪೋಸ್ಟರ್ ಹಾಕಲಾಗಿದೆ.
ಇನ್ನು ಈ ಸಂಬಂಧ ಕರ್ನಾಟಕ ತೆರೆದ ಸ್ಥಳಗಳ(ವಿಕಾರ ತಡೆಗಟ್ಟುವಿಕೆ) ಕಾಯ್ದೆಯ ಅಡಿ ಕೇಂದ್ರ ವಿಭಾಗದಲ್ಲಿ ಒಂದು ಎಫ್‌ಐಆರ್ ದಾಖಲಾಗಿದ್ದು, ಸಂಬಂಧಪಟ್ಟ ಡಿಸಿಪಿಗಳಿಂದ ಮಾಹಿತಿ ಕೇಳಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ತಿಳಿಸಿದ್ದಾರೆ. ಪೋಸ್ಟರ್ ಅಂಟಿಸಿದವರ ಪತ್ತೆಗೆ ಮುಂದಾಗಿರುವ ಪೊಲೀಸರು ಈಗ ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸುತ್ತಿದ್ದಾರೆ.