Connect with us

    BELTHANGADI

    ಬೆಳ್ತಂಗಡಿ ಪೊಲೀಸರ ಕಾರ್ಯಾಚರಣೆ -15ಕ್ಕೂ ಅಧಿಕ ಪ್ರಕರಣಗಳ ಅಂತಾರಾಜ್ಯ ಕಳ್ಳನ ಬಂಧನ..!

    ಬೆಳ್ತಂಗಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಅಂತರಾಜ್ಯದ ಕಳ್ಳತನಗಳಲ್ಲಿ ಭಾಗಿಯಾಗಿದ್ದ ನಟೋರಿಯಸ್ ಕಳ್ಳನನ್ನು ಬಲೆಗೆ ಹಾಕಿದ್ದಾರೆ.

    ಬೆಳ್ತಂಗಡಿ: ಬೆಳ್ತಂಗಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಅಂತರಾಜ್ಯದ ಕಳ್ಳತನಗಳಲ್ಲಿ ಭಾಗಿಯಾಗಿದ್ದ ನಟೋರಿಯಸ್ ಕಳ್ಳನನ್ನು ಬಲೆಗೆ ಹಾಕಿದ್ದಾರೆ.

    ಉಜಿರೆ ಮನೆಯೊಂದರಲ್ಲಿ ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಈತನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

    ಮೂಲತಃ ತಮಿಳುನಾಡಿನ ಕನ್ಯಾಕುಮಾರಿ ಅಗತೀಶ್ವರಂ ನಿವಾಸಿ ಉಮೇಶ್‌ ಯಾನೆ ಉಮೇಶ್‌ ಬಳೆಗಾರ (47) ಬಂಧಿತ ಆರೋಪಿಯಾಗಿದ್ದಾನೆ.

    ಆ. 12ರಂದು ಉಜಿರೆ ಅಜಿತ್‌ ನಗರದ ಕಲ್ಲೆ ನಿವಾಸಿ ಫೆಲಿಕ್ಸ್‌ ರೋಡ್ರಿಗಸ್‌ ಅವರ ಮನೆಗೆ ನುಗ್ಗಿದ್ದ ಈತ 6.92 ಲಕ್ಷ ರೂ. ಮೌಲ್ಯದ 173 ಗ್ರಾಂ ಚಿನ್ನಾಭರಣ, 35,000 ರೂ. ನಗದು ಕಳವು ಮಾಡಿದ್ದ.

    ಈ ಸಂಬಂಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

    ಕಳ್ಳತನ ಜಾಡು ಹಿಡಿದು ಹೋದ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್‌ ಕದ್ರಿ ಹಾಗೂ ಬೆರಳಚ್ಚು ಘಟಕದ ಡಿವೈಎಸ್‌ಪಿ ಗೌರೀಶ್‌ ನೇತೃತ್ವದ ತಂಡ ಆರೋಪಿತ ಉಮೇಶ್‌ನ ಜಾಡು ಹಿಡಿದು ಮೈಸೂರಿನ ಹುನ್ಸೂರಿನಲ್ಲಿ ಬಂಧಿಸಿದ್ದಾರೆ.

    ಆರೋಪಿ ಮಾರಾಟ ಮಾಡಿದ್ದ ಚಿನ್ನಾಭರಣ ಸಹಿತ ಇತರ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆಸಿದ್ದಾರೆ.

    ಈತ ಕಳ್ಳತನದಲ್ಲಿ ನಿಷ್ಣಾತನಾಗಿದ್ದು, ಬಟ್ಟೆ ವ್ಯಾಪಾರ ಮಾಡುವ ನೆಪದಲ್ಲಿ ಮನೆ-ಮನೆಗಳಿಗೆ ತೆರಳುತ್ತಿದ್ದ.

    ಈ ಸಂದರ್ಭ ಮನೆಯಲ್ಲಿ ಜನರಿದ್ದಾರೆಯೋ, ಹೊರಗೆ ಹೋಗಿದ್ದಾರೆಯೋ ಎನ್ನುವುದನ್ನು ತಿಳಿದುಕೊಂಡು ಬಳಿಕ ಸ್ಕೆಚ್ ಹಾಕುತ್ತಿದ್ದ. 14 ವರ್ಷವಿರುವಾಗಲೇ ಅಪರಾಧ ಕೃತ್ಯ ಆರಂಭಿಸಿದ್ದ ಆರೋಪಿ ಉಮೇಶ್ ಮೊಬೈಲ್‌ ಬಳಸದೆ ಬೇರೆಯವರ ಮೊಬೈಲ್‌ ಪಡೆದು ಕರೆ ಮಾಡುವ ಮೂಲಕ ಪೊಲೀಸರಿಗೆ ಸುಳಿವೇ ಸಿಗದಂತೆ ತಪ್ಪಿಸಿಕೊಳ್ಳುತ್ತಿದ್ದ.

    ಆದರೂ ಸಿಕ್ಕ ಸುಳಿವುಗಳನ್ನಾಧರಿಸಿ ಬೆಳ್ತಂಗಡಿ ಪೊಲೀಸರು ಪ್ರಕರಣ ಬೇಧಿಸಿದ್ದಾರೆ.

    ಈತನ ವಿರುದ್ದ ಪುತ್ತೂರು ನಗರ ಠಾಣೆ, ಸುಳ್ಯ, ಬಂಟ್ವಾಳ, ಮಂಗಳೂರಿನಲ್ಲಿ ಬಂದರು ಠಾಣೆ, ಉರ್ವ ಠಾಣೆ, ಮೂಡುಬಿದಿರೆ ಠಾಣೆ ಮತ್ತು ಕೇರಳ ರಾಜ್ಯದ ಕಾಸರಗೋಡು, ಕುಂಬಳೆ, ಪಾಲಕ್ಕಾಡು, ತೃಶ್ಯೂರ್‌, ತಿರುವನಂತಪುರ ಹಾಗೂ ತಮಿಳುನಾಡು ರಾಜ್ಯದ ಸೇಲಮ್‌, ಧರ್ಮಪುರಿ, ಕನ್ಯಾಕುಮಾರಿ, ದಿಂಡುಗಲ್ಲು ಮತ್ತು ಆಂಧ್ರ ರಾಜ್ಯದ ವೈಜಾಕ್‌ ಠಾಣಾ ವ್ಯಾಪ್ತಿಯಲ್ಲಿ ವಿವಿಧ ರೀತಿಯ ಕಳ್ಳತನ ಮಾಡಿರುವುದು ಪೊಲೀಸರ ವಿಚಾರಣೆಯಲ್ಲಿ ತಿಳಿದು ಬಂದಿದೆ.

    ಬೆಳ್ತಂಗಡಿ ಪೊಲೀಸ್‌ ಠಾಣೆಯ ಪಿಎಸ್‌ಐ ಧನರಾಜ್‌ ಟಿ.ಎಂ., ಚಂದ್ರಶೇಖರ ಎ.ಎಂ., ಎಎಸ್‌ಐ ಕೆ.ಜೆ. ತಿಲಕ್‌, ಶಿವರಾಮ ನಾಯ್ಕ, ಎಚ್‌ಸಿ ಬೆನ್ನಿಚ್ಚನ್‌, ಸುಂದರ ಶೆಟ್ಟಿ, ಪಳನಿವೇಲು, ಪ್ರಮೋದ್‌, ಇಬ್ರಾಹಿಂ, ಸಂಪತ್‌, ಪಿಸಿ ಚರಣ ರಾಜ್‌, ಆನಂದ ಹಾಗೂ ಜಿಲ್ಲಾ ಪೊಲೀಸ್‌ ಗಣಕಯಂತ್ರ ವಿಭಾಗದ ದಿವಾಕರ್‌, ಸಂಪತ್‌ ಅವರಿದ್ದ ತಂಡ ಆರೋಪಿಯ ಪತ್ತೆ ಕಾರ್ಯದಲ್ಲಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply