ಬೆಳ್ತಂಗಡಿ ಅಕ್ಟೋಬರ್ 03: ಮಹಿಳೆಯೊಬ್ಬರ ಮೃತದೇಹ ಬಾವಿಯಲ್ಲಿ ಪತ್ತೆಯಾದ ಘಟನೆ ಬೆಳಾಲು ಗ್ರಾಮದ ಮಾಚಾರುವಿನಲ್ಲಿ ನಡೆದಿದ್ದು, ಕೊಲೆ ಪ್ರಕರಣ ಎಂಬ ಅನುಮಾನ ವ್ಯಕ್ತವಾಗಿದ್ದು, ಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಮೃತರನ್ನು ಶಶಿಕಲಾ (27) ಎಂದು ಗುರುತಿಸಲಾಗಿದೆ. ಬೆಳಾಲು ಮಾಚಾರು ಸಮೀಪದ ಕೆಂಪನೊಟ್ಟು ಎಂಬಲ್ಲಿನ ತೋಟವೊಂದರಲ್ಲಿ ಈ ಘಟನೆ ಸಂಭವಿಸಿದೆ. ಶಶಿಕಲಾ ಹಾಗೂ ಅವರ ಪತಿ ಸುಧಾಕರ ನಾಯ್ಕ ಇಲ್ಲಿ ತೋಟವೊಂದರಲ್ಲಿ ಕೆಲಸಕ್ಕಿದ್ದರು. ಇವರಿಗೆ ಒಬ್ಬಳು ಮಗಳಿದ್ದು ಮಗಳು ತಾಯಿ ಮನೆಗೆ ಹೋಗಿದ್ದಳು ಎನ್ನಲಾಗಿದೆ.


ಗುರುವಾರ ರಾತ್ರಿ ಪತಿ ಪತ್ನಿ ಮಾತ್ರ ಮನೆಯಲ್ಲಿದ್ದರು.  ಬೆಳಗ್ಗೆ ಪತಿ ಸುಧಾಕರ ರಬ್ಬರ್ ಟ್ಯಾಪಿಂಗ್ ಮಾಡಲು ಹೋಗಿದ್ದರು ಎನ್ನಲಾಗಿದ್ದು, ಬಂದು ನೋಡಿದಾಗ ಶಶಿಕಲಾ ಅವರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ ಎಂದು ಆತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಮೃತದೇಹದ ಮರಣೋತ್ತರ ಪರೀಕ್ಷೆಯ ಬಳಿಕವಷ್ಟೆ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಬೇಕಾಗಿದೆ. ಇದೊಂದು ಕೊಲೆ ಪ್ರಕರಣ ಎಂಬ ಅನುಮಾನ ವ್ಯಕ್ತವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸುಧಾಕರ ನಾಯ್ಕನನ್ನು ಧರ್ಮಸ್ಥಳ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Share Information