DAKSHINA KANNADA
ತುಲಾಭಾರದ ವೇಳೆ ಕಳಚಿ ಬಿದ್ದ ತಕ್ಕಡಿ ,ಸಣ್ಣ ಗಾಯದೊಂದಿಗೆ ಪಾರಾದ ಉಡುಪಿ ಪೇಜಾವರ ಶ್ರೀ…!
ಉಡುಪಿ : ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಗೆ 60 ತುಂಬಿದ ಹಿನ್ನೆಲೆಯಲ್ಲಿ ನಡೆದ ಪ್ರಸನ್ನಾಭಿನಂದನ ಕಾರ್ಯಕ್ರಮದ ವೇಳೆ ಅಚಾತುರ್ಯ ಘಟನೆಯೊಂದು ನಡೆದಿದ್ದು ಸುದೈವ ಹೆಚ್ಚಿನ ಅನಾಹುತವೇನೂ ಆಗಿಲ್ಲ.
ಪ್ರಸ್ತುತ ದೆಹಲಿ ಪ್ರವಾಸದಲ್ಲಿರುವ ಉಡುಪಿ ಪೇಜಾವರ ಶ್ರೀ ದೆಹಲಿಯ ಪೇಜಾವರ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮಹತ್ವದ ಧಾರ್ಮಿಕ ಆಚರಣೆಯಾದ ಚಾತುರ್ಮಾಸ್ಯ ಕಾರ್ಯಕ್ರಮ ಪೂರ್ಣಗೊಳಿಸಿ ಬಂದ ಹಿನ್ನೆಲೆಯಲ್ಲಿ ಪೇಜಾವರ ಶ್ರೀಗಳಿಗೆ ಭಕ್ತರು ತುಲಾಭಾರ ಸೇವೆ ನಡೆಸುತ್ತಿದ್ದಾಗ ತಕ್ಕಡಿಯ ಹಗ್ಗ ಕಳಚಿ ಬಿದ್ದಿದೆ. ತಕ್ಕಡಿಯ ಕಬ್ಬಿಣದ ಅಡ್ಡ ಪಟ್ಟಿ ಕಳಚಿ ಪೇಜಾವರ ಶ್ರೀಗಳ ತಲೆಯ ಮೇಲೆ ಬಿದ್ದಿದೆ. ತಲೆಗೆ ಚಿಕ್ಕ ಗಾಯವಾಗಿದ್ದು, ಪೇಜಾವರ ಶ್ರೀಗಳು ಅಪಾಯದಿಂದ ಪಾರಾಗಿದ್ದಾರೆ. ತರಚಿದ ಗಾಯದೊಂದಿಗೆ ಪೇಜಾವರ ಶ್ರೀಗಳು ಸುರಕ್ಷಿತವಾಗಿದ್ದಾರೆ ಎಂದು ಭಕ್ತರು ತಿಳಿಸಿದ್ದಾರೆ. ತಕ್ಕಡಿ ಕುಸಿದು ಬೀಳುತ್ತಿದ್ದಂತೆ ಭಕ್ತರು ಆತಂಕಗೊಂಡರು. ಆದರೆ ಕೈ ಸನ್ನೆಯ ಮೂಲಕ ತಮಗೆ ಏನೂ ಆಗಿಲ್ಲ ಎಂದು ಪೇಜಾವರ ಶ್ರೀ ನಗುಮುಖ ಸೂಸಿದ್ದಾರೆ. ಈ ಬಗ್ಗೆ ದೆಹಲಿಯಲ್ಲಿ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು, ತುಲಾಭಾರ ಕಾರ್ಯಕ್ರಮದಲ್ಲಿ ತಕ್ಕಡಿ ಹಗ್ಗ ನನ್ನ ತಲೆಯ ಮೇಲೆ ಕಳಚಿ ಬಿತ್ತು. ಅದರಿಂದಾದ ಗಾಯ ಪೂರ್ಣ ಮಾಸಿಹೋಗಿದೆ. ಗಾಯದ ಕುರುಹು ಸಹ ಇಲ್ಲದಂತೆ ವಾಸಿಯಾಗಿದೆ. ದೊಡ್ಡ ಗಾಯ ಏನೂ ಆಗಿಲ್ಲ, ನಾನು ಆರಾಮವಾಗಿದ್ದೇನೆ. ಯಾರು ಗಾಬರಿಯಾಗಬೇಕಾಗಿಲ್ಲ, ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ಹೇಳಿದ್ದಾರೆ.
You must be logged in to post a comment Login