KARNATAKA
ಬೇಲೆಕೇರಿ ಅದಿರು ಅಕ್ರಮ ಸಾಗಾಟ ಪ್ರಕರಣ – ಕಾಂಗ್ರೇಸ್ ಶಾಸಕ ಸತೀಶ್ ಸೈಲ್ ಗೆ 7 ವರ್ಷ ಜೈಲು ಶಿಕ್ಷೆ
ಬೆಂಗಳೂರು ಅಕ್ಟೋಬರ್ 26: ಕಾರವಾರದ ಬೇಲೆಕೇರಿ ಬಂದರಿನಿಂದ ಅದಿರು ಅಕ್ರಮ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ಗೆ 7 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ. ಇದರೊಂದಿಗೆ ಇದೀಗ ಸತೀಶ್ ಸೈಲ್ ಶಾಸಕತ್ವ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಪ್ರಕರಣದ ವಾದ-ಪ್ರತಿವಾದ ಆಲಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಕ್ಟೋಬರ್ 24 ರಂದು ಶಾಸಕ ಸತೀಶ್ ಸೈಲ್ ದೋಷಿ ಎಂದು ತೀರ್ಪು ನೀಡಿತ್ತು. ಮುಟ್ಟುಗೋಲು ಹಾಕಿದ್ದ 11,312 ಮೆಟ್ರಿಕ್ ಟನ್ ಅದಿರನ್ನು ಅನುಮತಿ ಇಲ್ಲದೇ ಸಾಗಾಟ ಮಾಡಲಾಗಿತ್ತು. ಈ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು, ಮಹೇಶ್ ಬಿಳಿಯೆ, ಮಲ್ಲಿಕಾರ್ಜುನ ಶಿಪ್ಪಿಂಗ್ ಹಾಗೂ ಶಾಸಕ ಸತೀಶ್ ಸೈಲ್ ಅವರನ್ನು ದೋಷಿ ಎಂದು ತೀರ್ಪು ನೀಡಿದ್ದು ಶಿಕ್ಷೆ ಪ್ರಮಾಣವನ್ನು ಕಾಯ್ದಿರಿಸಿತ್ತು.
ಸತೀಶ್ ಸೈಲ್ ಗೆ ವಂಚನೆ ಪ್ರಕರಣದಲ್ಲಿ 7 ವರ್ಷ ಜೈಲು ಶಿಕ್ಷೆಯಾದರೆ, ಒಳಸಂಚು ಆರೋಪದಡಿ 5 ಮತ್ತು ಕಳ್ಳತನ ಆರೋಪದಡಿ 3 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಇದೇ ವೇಳೆ ಕೋರ್ಟ್ ದೊಡ್ಡ ಮಟ್ಟದ ದಂಡವನ್ನು ವಿಧಿಸಿದೆ. ಒಟ್ಟಾರೆ 44 ಕೋಟಿಗೂ ಹೆಚ್ಚು ದಂಡವನ್ನು ಕೋರ್ಟ್ ವಿಧಿಸಿದೆ. ನಿಯಮಗಳ ಪ್ರಕಾರ ಎರಡು ವರ್ಷಗಳಿಗಿಂತ ಹೆಚ್ಚಿನ ಜೈಲು ಶಿಕ್ಷೆಯಾದ ಕಾರಣ ಸತೀಶ್ ಸೈಲ್ ಶಾಸಕ ಸ್ಥಾನವೂ ಅನರ್ಹಗೊಳ್ಳಲಿದೆ. ಇದೀಗ ಸೈಲ್ಗೆ 7 ವರ್ಷದಷ್ಟು ಜೈಲು ಶಿಕ್ಷ ಆಗಿದೆ. ಹೀಗಾಗಿ ಶಾಸಕ ಸ್ಥಾನ ಅನರ್ಹಗೊಳ್ಳಲಿದೆ. ಒಂದು ವೇಳೆ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿ ಅಲ್ಲಿ ಶಿಕ್ಷೆಗೆ ತಡೆ ಸಿಕ್ಕರೆ ಅನರ್ಹತೆಯಿಂದ ಬಚಾವಾಗಬಹುದು.