LATEST NEWS
ಸುದ್ದಿವಾಹಿನಿಗಳ ರೇಟಿಂಗ್ ಸ್ಥಗಿತಗೊಳಿಸಿದ ಬಾರ್ಕ್
ನವದೆಹಲಿ, ಅಕ್ಟೋಬರ್ 15 : ಸುದ್ದಿವಾಹಿನಿಗಳ ವಾರದ ರೇಟಿಂಗ್‌ಗಳನ್ನು ಮೂರು ತಿಂಗಳ ಕಾಲ ಸ್ಥಗಿತಗೊಳಿಸಲು ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ ನಿರ್ಧಾರ ಕೈಗೊಂಡಿದೆ.
ನಕಲಿ ಟಿಆರ್‌ಪಿ ಆರೋಪದ ಹಿನ್ನೆಲೆಯಲ್ಲಿ ‘ಬಾರ್ಕ್’ ಈ ನಿರ್ಧಾರ ಕೈಗೊಂಡಿದ್ದು, ಟಿಆರ್‌ಪಿ ರೇಟಿಂಗ್ ಸ್ಥಗಿತವು ಎಲ್ಲ ಹಿಂದಿ, ಇಂಗ್ಲಿಷ್, ವಾಣಿಜ್ಯ ಹಾಗೂ ಪ್ರಾದೇಶಿಕ ಸುದ್ದಿವಾಹಿನಿಗಳು ತಕ್ಷಣದಿಂದಲೇ ಅನ್ವಯಿಸಲಿದೆ.
‘ಸ್ಥಾಪಿತ ದತ್ತಾಂಶಗಳನ್ನು ಅಳೆಯುವ ಮತ್ತು ವರದಿಯ ಪ್ರಸ್ತುತ ಮಾನದಂಡಗಳನ್ನು ಪರಿಶೀಲಿಸಲು ಉದ್ದೇಶಿಸಲಾಗಿದೆ. ದತ್ತಾಂಶ ಸಂಗ್ರಹಿಸುವ ಮನೆಗಳಲ್ಲಿ ನಡೆಯುವ ಸಂಭಾವ್ಯ ಹಸ್ತಕ್ಷೇಪವನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಮೂರು ತಿಂಗಳ ಕಾಲ (12 ವಾರಗಳು) ರೇಟಿಂಗ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಬಾರ್ಕ್ ಹೇಳಿದೆ.
ಬಾರ್ಕ್‌ನ ನಿರ್ಧಾರವನ್ನು ದೇಶದ ಖಾಸಗಿ ಸುದ್ದಿ ವಾಹಿನಿಗಳನ್ನು ಪ್ರತಿನಿಧಿಸುವ ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಷನ್ (ಎನ್‌ಬಿಎ) ಸ್ವಾಗತಿಸಿದೆ.
‘ವಿಷಕಾರುವ, ನಿಂದನೆ ಮತ್ತು ನಕಲಿ ಸುದ್ದಿಗಳ ಪ್ರಸ್ತುತ ವಾತಾವರಣವು ಇನ್ನು ಮುಂದೆ ಸಮರ್ಥನೀಯವಲ್ಲ ಮತ್ತು ಈ ನಿಟ್ಟಿನಲ್ಲಿ ರೇಟಿಂಗ್‌ಗಳ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ‘ಬಾರ್ಕ್’ನ ದಿಟ್ಟ ಹೆಜ್ಜೆಯು ಸುಧಾರಣೆಗೆ ಸಹಾಯ ಮಾಡುವ ವಿಶ್ವಾಸವಿದೆ’ ಎಂದು ಎನ್‌ಬಿಎ ಅಧ್ಯಕ್ಷ ರಜತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.
‘ರಿಪಬ್ಲಿಕ್ ಟಿವಿ’ ಸೇರಿದಂತೆ ಮೂರು ಸುದ್ದಿವಾಹಿನಿಗಳ ವಿರುದ್ದ ಟಿಆರ್‌ಪಿ ತಿರುಚುವಿಕೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ.
ಟಿಆರ್‌ಪಿ ತಿರುಚುವಿಕೆಗೆ ಸಂಬಂಧಿಸಿದಂತೆ ತನ್ನ ವಿರುದ್ಧದ ಆರೋಪವನ್ನು ರಿಪಬ್ಲಿಕ್ ಟಿವಿ ತಳ್ಳಿ ಹಾಕಿದೆ.