BANTWAL
ಬಂಟ್ವಾಳ ತುಂಬೆ ಡ್ಯಾಂ ಸಂತ್ರಸ್ಥ ಕೃಷಿಕರ ಈ ಗೋಳು ಕೇಳೋರ್ಯಾರು..!
ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಡ್ಯಾಮ್‌ನಿಂದ ಹೊರ ಹೋಗುತ್ತಿರುವ ನೀರಿನ ಅಲೆಗಳ ಅಪ್ಪಳಿಸುವಿಕೆಯಿಂದ ತುಂಬೆ ಗ್ರಾಮದಲ್ಲಿ ಕೃಷಿ ಭೂಮಿ ನಿರಂತರವಾಗಿ ನದಿ ಪಾಲಾಗುತ್ತಿದ್ದು ಜೋಪಾನದಿಂದ ಪೋಷಿಸಿದ್ದ ತೆಂದು, ಅಡಿಕೆ ಕೃಷಿ ನೀರುಪಾಲಾಗುತ್ತಿದ್ದು ಕೃಷಿಕರ ಗೋಳು ಅರಣ್ಯರೋದನವಾಗಿದೆ.
ಬಂಟ್ವಾಳ: ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಡ್ಯಾಮ್‌ನಿಂದ ಹೊರ ಹೋಗುತ್ತಿರುವ ನೀರಿನ ಅಲೆಗಳ ಅಪ್ಪಳಿಸುವಿಕೆಯಿಂದ ತುಂಬೆ ಗ್ರಾಮದಲ್ಲಿ ಕೃಷಿ ಭೂಮಿ ನಿರಂತರವಾಗಿ ನದಿ ಪಾಲಾಗುತ್ತಿದ್ದು ಜೋಪಾನದಿಂದ ಪೋಷಿಸಿದ್ದ ತೆಂದು, ಅಡಿಕೆ ಕೃಷಿ ನೀರುಪಾಲಾಗುತ್ತಿದ್ದು ಕೃಷಿಕರ ಗೋಳು ಅರಣ್ಯರೋದನವಾಗಿದೆ.
ತಡೆಗೋಡೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ ಮಂಗಳೂರು ಮಹಾನಗರಪಾಲಿಕೆಯ ವಿಳಂಬ ನೀತಿಯಿಂದ ದಿನ ಕಳೆದಂತೆ ಮತ್ತಷ್ಟು ಕೃಷಿ ಭೂಮಿ ನದಿ ಪಾಲಾಗುತ್ತಿದೆ.
ಡ್ಯಾಂನ್ನು 6 ಮೀ.ಗೆ ಏರಿಸಿದ ಬಳಿಕ ಈ ಸಮಸ್ಯೆ ಹೆಚ್ಚಾಗಿದ್ದು, ಕಳೆದ ಹಲವು ವರ್ಷಗಳಿಂದ ಕೃಷಿಕರು ಸಂಬಂಧಪಟ್ಟವರಲ್ಲಿ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳುತ್ತಿದ್ದಾರೆ.
ಆದರೆ ತಡೆಗೋಡೆ ನಿರ್ಮಿಸುವ ಕುರಿತು ಯಾರೂ ಕೂಡ ಗಮನಹರಿಸದೇ ಇರುವುದರಿಂದ ದಿನ ಕಳೆದಂತೆ ಭೂಮಿ ಕುಸಿತ ಮುಂದುವರಿಯುತ್ತಲೇ ಇದೆ.
ತಡೆಗೋಡೆ ನಿರ್ಮಾಣಕ್ಕೆ 2 ಕೋ.ರೂ. ಮೀಸಲಿಟ್ಟಿದೆ ಎಂದು ಹೇಳಿದ್ದ ಮಂಗಳೂರು ನಗರ ಪಾಲಿಕೆ ಅದರ ಅನುಷ್ಠಾನ ಕಾರ್ಯ ಇನ್ನೂ ಮಾಡಿಲ್ಲ.
ಡ್ಯಾಂನ ಗೇಟ್ ತೆರೆದ ಹೆಚ್ಚಿನ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗುತ್ತಿದ್ದು, ಅ ನೀರು ನದಿಯ ಇಕ್ಕೆಲಗಳಿಗೆ ಬಡಿಯುತ್ತಲೇ ಇದೆ. ಹೀಗೆ ಬಡಿಯುತ್ತಿರುವ ಪರಿಣಾಮ ಮಣ್ಣು ಕುಸಿಯುತ್ತಲೇ ಇದ್ದು, ತಳ ಭಾಗದಲ್ಲಿ ಪೂರ್ತಿ ಮಣ್ಣು ಖಾಲಿಯಾಗಿದ್ದು, ಶೀಘ್ರದಲ್ಲಿ ಮತ್ತಷ್ಟು ಭೂಮಿ ಕುಸಿಯಲು ಸಿದ್ಧಗೊಂಡಿದೆ.
ತುಂಬೆ ಗ್ರಾಮದ ಸ್ಥಳೀಯ ಕೃಷಿಕರಾದ ಲೋಕಯ್ಯ, ಭಾಸ್ಕರ, ಗಂಗಾಧರ, ಪುರುಷೋತ್ತಮ, ಲಿಂಗಪ್ಪ, ಆನಂದ ಶೆಟ್ಟಿ, ಮೊಯಿದ್ದೀನ್ ಅವರ ಕೃಷಿ ಭೂಮಿ ನದಿ ಪಾಲಾಗಿ ಈಗಾಗಲೇ ನೂರಾರು ಅಡಿಕೆ ಮರಗಳು, ತೆಂಗಿನ ಮರಗಳು ನದಿ ಪಾಲಾಗಿದ್ದು, ಇತ್ತೀಚೆಗೆ ಬಿದ್ದ ಮರಗಳನ್ನು ನದಿಯ ತಳ ಭಾಗದಲ್ಲಿ ಕಾಣಬಹುದಾಗಿದೆ.
ಇನ್ನೂ ಒಂದಷ್ಟು ಅಡಿಕೆ, ತೆಂಗಿನ ಮರಗಳು ಬೀಳುವುದಕ್ಕೆ ಸಿದ್ಧಗೊಂಡಿರುವುದು ಕಂಡುಬರುತ್ತಿದೆ.
ಕಳೆದ 2 ವರ್ಷಗಳ ಹಿಂದೆ ಸುಮಾರು 250ಕ್ಕೂ ಅಧಿಕ ಅಡಿಕೆ ಗಿಡ, ಬಾಳೆ ಗಿಡ, 60ಕ್ಕೂ ಅಡಿಕೆ ತೆಂಗಿನಮರಗಳು ನದಿ ಪಾಲಾಗಿದ್ದು, ಒಂದೂವರೆ ಎಕರೆಯಷ್ಟು ಭೂಮಿ ನದಿ ಪಾಲಾಗಿತ್ತು.
ಆದರೆ ಈಗಿನ ಸ್ಥಿತಿ ಲೆಕ್ಕಚಾರ ಹಾಕಿದರೆ ಅದರ ಪ್ರಮಾಣ 2 ಪಟ್ಟು ಹೆಚ್ಚಾಗಿದ್ದು, 3ರಿಂದ 4 ಎಕರೆಯಷ್ಟು ಕೃಷಿ ಭೂಮಿ ನಾಶವಾಗಿದೆ ಎಂದು ಕೃಷಿಕರು ಆರೋಪಿಸುತ್ತಿದ್ದಾರೆ.
ತುಂಬೆ ಡ್ಯಾಮ್‌ನಲ್ಲಿ ಸದ್ಯಕ್ಕೆ ಎರಡು ಗೇಟ್‌ಗಳ ಮೂಲಕ ನೀರು ಹೊರಕ್ಕೆ ಹೋಗುತ್ತಿದ್ದು, ಬರೀ ಎರಡೇ ಗೇಟ್ ತೆರೆದಿದ್ದರೂ ಅಲೆಗಳ ಹೊಡೆತ ಜೋರಾಗಿಯೇ ಇದೆ.
ಡ್ಯಾಮ್‌ನಿಂದ ಸ್ವಲ್ಪ ಮುಂದಕ್ಕೆ ತಡೆಗೋಡೆ ನಿರ್ಮಿಸಲಾಗಿದ್ದು, ಅದರ ನೇರವನ್ನು ಗಮನಿಸಿದರೆ ಯಾವ ಪ್ರಮಾಣದಲ್ಲಿ ಭೂಮಿ ನದಿ ಪಾಲಾಗಿದೆ ಎಂಬುದು ಸ್ಪಷ್ಟಗೊಳ್ಳುತ್ತದೆ.
ಈ ಕೂಡಲೇ ಜನಪ್ರತಿನಿಧಿಗಳು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿ ಸ್ಥಳಿಯ ಕೃಷಿಕರು ಆಗ್ರಹಿಸಿದ್ದಾರೆ,