BANTWAL
ಬಂಟ್ವಾಳ: ಸೊರ್ನಾಡು – ಮುಲಾರಪಟ್ನ ದಾರಿ, ಯಮಲೋಕಕ್ಕೆ ರಹದಾರಿ..!
ಬಂಟ್ವಾಳ : ಬಂಟ್ವಾಳ ತಾಲೂಕಿನ ಸೊರ್ನಾಡು – ಮುಲಾರಪಟ್ನ ಮುಖ್ಯ ರಸ್ತೆಯಲ್ಲಿ ಅಲ್ಲಲ್ಲಿ ಡಾಮರು ಎದ್ದು ಹೋಗಿದ್ದು, ಅಪಾಯಕಾರಿ ಗುಂಡಿಗಳು ಸೃಷ್ಟಿಯಾಗಿದ್ದು ಈ ದಾರಿ ಯಮಲೋಕಕಕ್ಕೆ ರಹದಾರಿಯಂತಾಗಿದೆ.
ಗುಂಡಿಗಳನ್ನು ಜಲ್ಲಿಕಲ್ಲುಗಳಿಂದ ಮುಚ್ಚಲಾದ ಪರಿಣಾಮವಾಗಿ ದ್ವಿಚಕ್ರ ವಾಹನ ಸವಾರರಿಗೆ ಈ ರಸ್ತೆ ಯಮಲೋಕದ ದಾರಿಯಾಗಿ ಪರಿಣಮಿಸುತ್ತಿದ್ದು ಈಗಾಗಲೇ ಆನೇಕರು ಬಿದ್ದು ಕೈಕಾಲುಗಳನ್ನು ಮುರಿಸಿಕೊಂಡಿದ್ದಾರೆ. ಸೊರ್ನಾಡುವಿನಿಂದ ಮುಲಾರಪಟ್ನ ವರೆಗೆ ರಸ್ತೆಗೆ ಡಾಮರೀಕರಣಕ್ಕಾಗಿ ಕಳೆದ ಮಳೆಗಾಲದ ಮುನ್ನವೇ ಅನುದಾನ ಬಿಡುಗಡೆಯಾಗಿತ್ತು.
ಆದರೆ ಗುತ್ತಿಗೆ ವಹಿಸಿಕೊಂಡಿದ್ದ ಜೆ.ಡಿ.ಸುವರ್ಣ ಕಂಪೆನಿಯವರು ಮಳೆಗಾಲ ಆರಂಭಿಕ ದಿನಗಳಲ್ಲಿ ಒಂದು ಲೇಯರ್ ಡಾಮರು ಹಾಕಿ ಜನರ ಕಣ್ಣಿಗೆ ಮಣ್ಣೆರೆರಚುವ ಕಾರ್ಯಮಾಡಿ ಕೈ ತೊಳೆದುಕೊಂಡಿದ್ದರು.
ಆದರೆ ಮಳೆ ಮುಗಿಯುತ್ತಿದ್ದಂತೆ ಅಲ್ಲಲ್ಲಿ ಡಾಮರು ಎದ್ದು ಹೋಗಿ, ಅಲ್ಲಲ್ಲಿ ಹೊಂಡ ಗುಂಡಿಗಳು ತುಂಬಿಕೊಂಡಿತ್ತು. ಅದರ ಗುಂಡಿಗಳ ತಾತ್ಕಾಲಿಕ ಶಮನಕ್ಕಾಗಿ ಗುತ್ತಿಗೆದಾರರು ಗುಂಡಿಗಳಿಗೆ ಜಲ್ಲಿ ಕಲ್ಲು ಹಾಕಿ ಮುಚ್ಚಿದ್ದಾರೆ.
ಘನ ಗಾತ್ರದ ವಾಹನಗಳು ಹೋಗುವ ರಭಸಕ್ಕೆ ಜಲ್ಲಿ ಕಲ್ಲುಗಳು ಗುಂಡಿಯಿಂದ ಮೇಲಕ್ಕೆ ಬಂದು ರಸ್ತೆಯೆಲ್ಲಾ ಹರಡಿಕೊಂಡಿದ್ದು, ದ್ವಿಚಕ್ರವಾಹನಸವಾರರು ರಾತ್ರಿ ವೇಳೆ ಬಿದ್ದು ಕೈಕಾಲಿಗೆ ಗಾಯ ಮಾಡಿಕೊಂಡ ಘಟನೆಗಳು ನಡೆದಿದೆ.
ಗಾಯಗೊಂಡ ವ್ಯಕ್ತಿಗಳು ರಸ್ತೆ ಗುತ್ತಿಗೆದಾರರ ಮೇಲೆ ಕಾನೂನು ಕ್ರಮಕ್ಕೆ ದೂರು ನೀಡುವ ಬದಲು ಹಿಡಿಶಾಪ ಹಾಕಿ ಸುಮ್ಮನಾಗಿದ್ದಾರೆ.
ಮಳೆ ನಿಂತ ಕೂಡಲೇ ಕಾಮಗಾರಿ ಆರಂಭ:
ಸೊರ್ನಾಡು – ಮುಲಾರಪಟ್ನ ರಸ್ತೆಯ ಒಂದು ಪ್ರಥಮ ಹಂತದ ಡಾಮರು ಕಾಮಗಾರಿ ನಡೆದಿದೆ.ಇನ್ನೊಂದು ಹಂತದ ಡಾಮರು ಕಾರ್ಯ ಶೀಘ್ರವಾಗಿ ಆರಂಭಿಸಲು ಗುತ್ತಿಗೆ ವಹಿಸಿಕೊಂಡ ಜೆ.ಡಿ.ಸುವರ್ಣ ಕಂಪೆನಿಗೆ ಸೂಚಿಸಿದ್ದೇನೆ. ಮಳೆಯ ಕಾರಣ ಡಾಮರು ಪ್ಲಾಂಟ್ ಆರಂಭವಾಗಿಲ್ಲ.ಮಳೆ ನಿಂತ ಕೂಡಲೇ ಎರಡನೇ ಲೇಯರ್ ಡಾಮರು ಕಾಮಗಾರಿ ಆರಂಭಗೊಳ್ಳಲಿದೆ. ಗುಂಡಿ ಮುಚ್ಚಲು ಹಾಕಲಾದ ಜಲ್ಲಿಕಲ್ಲಿನಿಂದ ವಾಹನಸವಾರರಿಗೆ ತೊಂದರೆಯಾಗಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಶೀಘ್ರವಾಗಿ ಕಾಮಗಾರಿ ಆರಂಭಿಸಲು ತಿಳಿಸಿದ್ದೇನೆ ಎಂದು ಪ.ಡಬ್ಲೂ.ಡಿ.ಇಂಜಿನಿಯರ್ ಶಿವಪ್ರಕಾಶ್ ತಿಳಿಸಿದ್ದಾರೆ.
ನೀರಿನ ಪೈಪ್‌ಲೈನ್‌ನಿಂದ ಕಾಮಗಾರಿಗೆ ತೊಡಕು:
ರಸ್ತೆ ಬದಿಯಲ್ಲಿ ಜೆ.ಜೆ.ಎಮ್ ನೀರು ಸರಬರಾಜು ಮಾಡುವ ಪೈಪ್ ಲೈನ್ ಕಾಮಗಾರಿಯವರು ಕಾಮಗಾರಿ ನಡೆಸದೆ ಅರ್ಧಕ್ಕೆ ನಿಲ್ಲಿಸಿ ಹೋಗಿದ್ದಾರೆ. ಹಾಗಾಗಿ ರಸ್ತೆಯೆಲ್ಲಾ ಹಾಳಾಗಿದ್ದು ಇವರ ಮೇಲೆ ಕ್ರಮಕ್ಕಾಗಿ ಮೂರು ಬಾರಿ ಪತ್ರ ಬರೆದಿದ್ದೇನೆ. ಇದರ ಜೊತೆ ಏರ್ ಟೆಲ್ ಕಂಪೆನಿಯವರು ರಸ್ತೆ ಬದಿ ನಿಯಮ ಮೀರಿ ಕೇಬಲ್ ಅಳವಡಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಲ್ಲದೆ ಅವರ ಜೆಸಿಬಿ ಯನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸುವಂತೆ ಟ್ರಾಫಿಕ್ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಪಿ.ಡಬ್ಲೂಡಿ ಇಂಜಿನಿಯರ್ ಶಿವಪ್ರಕಾಶ್ ತಿಳಿಸಿದರು.