BANTWAL
ಬಂಟ್ವಾಳ – ತಾಯಿ ಮಗಳಿಗೆ ಚಾಕು ತೋರಿಸಿ ದರೋಡೆ – ಏಳು ಮಂದಿ ಅರೆಸ್ಟ್
ಬಂಟ್ವಾಳ ಜನವರಿ 23 : ಬಂಟ್ವಾಳದ ವಗ್ಗದಲ್ಲಿ ತಾಯಿ ಮತ್ತು ಮಗಳಿಗೆ ಚಾಕು ತೋರಿಸಿ ನಗ ನಗದು ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ಬಂಟ್ವಾಳ ಪೊಲೀಸರ ಬಂಧಿಸಿ ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಧಿತರನ್ನು ಉಡುಪಿ ಜಿಲ್ಲೆಯ ಕಾರ್ಕಳದ ಮಲ್ಲಾರು ನಿವಾಸಿ ಗಣೇಶ್ ನಾಯ್ಕ್, ದಿನೇಶ್ ನಾಯ್ಕ್, ಮಾಳ ಗ್ರಾಮದ ಇಂದಿರಾನಗರ ನಿವಾಸಿ ಸಾಗರ್ ಶೆಟ್ಟಿ, ಮಂಗಳೂರು ಐಕಳ ಗ್ರಾಮದ ರಾಕೇಶ್ ಎಲ್ ಪಿಂಟೋ, ಕಡಬದ ಕೆಲೆಂಬೇರಿ ನಿವಾಸಿಗಳಾದ ಎಂ.ಸೀತಾರಾಮ, ಸುದೀರ್ ಹಾಗೂ ಚಿಕ್ಕಮಗಳೂರು ನಿವಾಸಿ ಹನೀಫ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ದರೋಡೆಗೈದ 54 ಗ್ರಾಂ ಚಿನ್ನಾಭರಣ ಹಾಗೂ ಇನ್ನೋವಾ ಮತ್ತು ಇಂಡಿಕಾ ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಜನವರಿ 11ರಂದು ಬೆಳಗ್ಗೆ ಬಂಟ್ವಾಳ ತಾಲೂಕಿನ ವಗ್ಗ ಸಮೀಪದ ಅಂಚಿಕಟ್ಟೆ ಮೇನಾಡು ನಿವಾಸಿ ಮರೀಟಾ ಸಿಂಥಿಯಾ ಪಿಂಟೋ ಎಂಬವರ ಮನೆಗೆ ಬಂದ ಮುಸುಕುದಾರಿಗಳು ಮನೆಯಲ್ಲಿದ್ದ ತಾಯಿ ಪ್ಲೋರಿನಾ ಪಿಂಟೊ ಹಾಗೂ ಮಗಳು ಮರಿಟಾ ಪಿಂಟೋ ಅವರಿಗೆ ಚೂರಿ ತೋರಿಸಿ ಗೊದ್ರೇಜ್ ಕೀ ನೀಡುವಂತೆ ಹೆದರಿಸಿದ್ದು, ನೀಡದಿದ್ದರೆ ಕೊಲ್ಲುವ ಬೆದರಿಕೆ ಹಾಕಿ ಕಪಾಟಿನ ಕೀ ಪಡೆದು ಚಿನ್ನ ಹಾಗೂ ನಗದು ಹಣವನ್ನು ದೋಚಿ ಪರಾರಿಯಾಗಿದ್ದರು. ಪೊಲೀಸರ ವಿಶೇಷ ಪ್ರಯತ್ನದ ಮೂಲಕ ಆರೋಪಿಗಳ ಪತ್ತೆ ಕಾರ್ಯವನ್ನು ಮೆಚ್ಚಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಬಹುಮಾನವನ್ನು ಘೋಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
You must be logged in to post a comment Login