BANTWAL
‘ಗೋಣಿ,ಗೋಣಿ ಅರಿನ್ ಕಂಡಿಯೆರಾ?’ ಪ್ರತಿಭಟನೆಯ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್..!
ಬಂಟ್ವಾಳ: ಗೋಣಿ,ಗೋಣಿ ಅರಿನ್ ಕಂಡಿಯೆರಾ? ಅರಿನ್ ಕಂಡಿನಾ ಕಳುವೆರ್ ಮೂಲು ಉಲ್ಲೇರಾ? ಸಾರ ಲಕ್ಷಲಾ ಅತ್ ಕೋಟಿ ಕಡತದ್ ಮಿತ್ತ್ ಅನ್ನದ ಭಾಗ್ಯ ಅರಿನ್ ಮೂಲು ಪೆರ್ಗುಡೆ ನಿಂಗ್ ಡಾ ,ಸ್ವಾಮಿ ಅರಿನ್ ಕಂಡಿನ ಕಳುವೆ ಓಲ್ಲೆನಾ? ಹೀಗೊಂದು ಪ್ರತಿಭಟನೆಯ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ.
ಜ.16 ರಂದು ಮಂಗಳವಾರ ಬಿಸಿರೋಡಿನ ಆಡಳಿತ ಸೌಧದ ಕಚೇರಿಯ ಮುಂಭಾಗದಲ್ಲಿ ಮಾಜಿ ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ಅವರ ನೇತ್ರತ್ವದಲ್ಲಿ ನಡೆಯುವ ಬೃಹತ್ ಪ್ರತಿಭಟನೆ ಹಾಗೂ ಕಚೇರಿ ಮುತ್ತಿಗೆಯ ಪ್ರಚಾರದ ಆಡಿಯೋ ಇದಾಗಿದ್ದು, ಎಲ್ಲಡೆ ವೈರಲ್ ಆಗಿದೆ.
ಬಿಸಿರೋಡಿನ ಖ್ಯಾತ ಸಂಗೀತ ಗಾಯಕ ವೈಭವಿ ಮೂಸಿಕಲ್ಸ್ ನ ಮಾಲಕ ಭಾಸ್ಕರ ರಾವ್ ಹಾಗೂ ಚಲನಚಿತ್ರ ನಟ ಮತ್ತು ಖ್ಯಾತ ಕಲಾವಿದ ತುಳು ನಿರೂಪಕ ಎಚ್ಕೆ ನಯನಾಡು ಅವರ ಸ್ವರ ಮಾಧುರ್ಯದಲ್ಲಿ ಆಡಿಯೋ ರೆಕಾರ್ಡಿಂಗ್ ಆಗಿದ್ದು, ವಿಭಿನ್ನ ಶೈಲಿಯ ಪ್ರಚಾರದ ದೃಷ್ಟಿಕೋನ ಸಾರ್ವಜನಿಕ ವಲಯದಲ್ಲಿ ಒಂದಷ್ಟು ಖುಷಿ ತಂದಿದೆ.
ಸಂಗೀತ ಹಾಗೂ ನಿರೂಪಣೆ ಎರಡು ಒಂದೇ ಕಡೆ ಜತೆಯಾಗಿದ್ದು, ಕೇಳುಗರಿಗೆ ಒಂದು ರೀತಿಯಲ್ಲಿ ಇಂಪು ನೀಡಿದೆ.
ಪ್ರತಿಭಟನೆಯಲ್ಲಿ ಜನರನ್ನು ಸೇರಿಸಬೇಕು ಎಂಬ ದೃಷ್ಟಿಯಿಂದ ತುಂಗಪ್ಪ ಬಂಗೇರ ಅವರು ಹೊಸ ಯೋಚನೆಯನ್ನು ಮಾಡಿ, ಈ ಆಡಿಯೋವನ್ನು ರಿಲೀಸ್ ಮಾಡಿದ್ದಾರೆ.
ಜ.16 ರಂದು ಯಾವ ವಿಚಾರದಲ್ಲಿ ಪ್ರತಿಭಟನೆ..!?
ಬಂಟ್ವಾಳ ತಾಲೂಕು ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳು ಹಾಗೂ ಸಾರ್ವಜನಿಕರೊಂದಿಗೆ, ಎಂ.ತುಂಗಪ್ಪ ಬಂಗೇರ ಅವರ ನೇತ್ರತ್ವದಲ್ಲಿ ಜ.16 ರಂದು ಮಂಗಳವಾರ ಬೆಳಿಗ್ಗೆ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಹಾಗೂ ಮುತ್ತಿಗೆ ಹಾಕುವುದಾಗಿ ತಾಲೂಕು ತಹಶಿಲ್ದಾರ್ ಅವರಿಗೆ ಈಗಾಗಲೇ ಮನವಿ ಮಾಡಿದ್ದಾರೆ.
ಅನ್ನಭಾಗ್ಯ ಯೋಜನೆಯ ಅಕ್ಕಿ ಕಳವು ತನಿಖೆಯಾಗದಿರುವ ಬಗ್ಗೆ ಹಾಗೂ 2023 ನೇ ಸಾಲಿನಲ್ಲಿ ಅಕ್ರಮ ಸಕ್ರಮ ಜಮೀನು ಮಂಜೂರಾದ ಫಲನುಭವಿಗಳಿಗೆ ಸಾಗುವಳಿ ಚೀಟಿ ನೀಡುವಂತೆ ಒತ್ತಾಯಿಸಿ, ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮತ್ತು ಕಚೇರಿ ಮುತ್ತಿಗೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಬಡವರಿಗೆ ನೀಡುವ ಪಡಿತರ ಗೋದಾಮಿನಿಂದ 3850 ಕಿಂಟ್ವಾಲ್ ಅಕ್ಕಿ ಕಳವಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ತನಿಖೆ ಮಾಡಿ ಹಲವು ತಿಂಗಳು ಕಳೆದರೂ ತಪ್ಪಿತಸ್ಥರು ಯಾರು ಎಂದು ಗುರುತಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು ವಿಷಾಧನೀಯ ಎಂದು ಅವರು ಹೇಳಿದ್ದಾರೆ.
ಅಕ್ಕಿ ಕಳವು ನಡೆಸುತ್ತಿರುವ ದೊಡ್ಡ ಜಾಲವೊಂದು ಇದ್ದು, ಅವರನ್ನು ಕೆಲವೊಂದು ಜನಪ್ರತಿನಿಧಿಗಳು ರಕ್ಷಣೆ ಮಾಡುತ್ತಿರುವುದು ನಮಗೆ ಗಮನಕ್ಕೆ ಬಂದಿದೆ. ಹಾಗಾಗಿ ಬಡವರ ಹೊಟ್ಟೆಗೆ ಹಿಟ್ಟಿಲ್ಲದಂತೆ ಮಾಡಿ ತನ್ನ ಹೊಟ್ಟೆಯನ್ನು ದೊಡ್ಡದು ಮಾಡುತ್ತಿರುವ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ಅವರು ಒತ್ತಾಯ ಮಾಡಿದ್ದರೆ.
ಇದರ ಜೊತೆಗೆ 2023 ನೇ ಸಾಲಿನಲ್ಲಿ ಅಕ್ರಮ ಸಕ್ರಮ ಜಮೀನು ಮಂಜೂರಾದ ಫಲಾನುಭವಿಗಳಿಗೆ ಸಾಗುವಳಿ ಚೀಟಿ ನೀಡಿರುವುದಿಲ್ಲ, ಅಲ್ಲದೆ ಸಾಗುವಳಿ ಚೀಟಿ ಸಿಕ್ಕವರಿಗೆ ಆರ್‌ಟಿಸಿ ನೀಡಿರುವುದಿಲ್ಲ, ಹಾಗಾಗಿ ಅನಿವಾರ್ಯವಾಗಿ ತಾಲೂಕಿನ ಅನ್ನ ಭಾಗ್ಯ ಫಲಾನುಭವಿಗಳು ಹಾಗೂ ಅಕ್ರಮ ಸಕ್ರಮ ಜಮೀನು ಮಂಜೂರಾದ ಫಲಾನುಭವಿಗಳು ಮತ್ತು ಸಾರ್ವಜನಿಕ ರೊಂದಿಗೆ ಪ್ರತಿಭಟನೆ ನಡೆಸಲು ಮುಂದಾಗಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.