BANTWAL
ಬಂಟ್ವಾಳ – ರಸ್ತೆ ಮಧ್ಯೆ ಮುರಿದು ಬೀಳುವ ಹಂತದಲ್ಲಿ ಲೈಟ್ ಕಂಬ..!
ಬಂಟ್ವಾಳ : ಅಕ್ಟೋಬರ್ 16: ರಾಷ್ಟ್ರೀಯ ಹೆದ್ದಾರಿಯಲ್ಲೇ ಮುರಿದು ಬಿಳುವ ಸ್ಥಿತಿಯಲ್ಲಿ ರಸ್ತೆ ಮಧ್ಯೆ ವಿದ್ಯುತ್ ಕಂಬವೊಂದು ನೇತಾಡುತ್ತಿದ್ದು , ಇದೀಗ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರನ್ನು ಬೆಚ್ಚಿಬಿಳಿಸಿದೆ. ರಾಷ್ಟ್ರೀಯ ಹೆದ್ದಾರಿ 75 ರ ಮಂಗಳೂರು ಬೆಂಗಳೂರು ರಸ್ತೆ ಮಧ್ಯೆ ಬಿಸಿರೋಡು ಸಮೀಪದ ಕೈಕಂಬ ಮಿತ್ತಬೈಲು ಬದ್ರಿಯಾ ಜುಮಾಮಸೀದಿ ಎದುರು ಕಡೆ ಈ ವಿದ್ಯುತ್ ಕಂಬ ಯಾವ ಕ್ಷಣದಲ್ಲಾದರೂ ಬೀಳುವ ಹಂತದಲ್ಲಿದೆ.
ಅಕ್ಟೋಬರ್ 15 ರಂದು ಆದಿತ್ಯವಾರ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಡಿವೈಡರ್ ಗೆ ಹೊಡೆದು ಬಳಿಕ ಅಲ್ಲೇ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬದ ಸೊಂಟ ಮುರಿದು ಬಿದ್ದು ಜೀವ ಕಳೆದುಕೊಂಡು ನೇತಾಡಿಕೊಂಡು ಇದೆ. ಕಂಬ ಮುರಿದು 24 ಗಂಟೆಗಳ ಕಾಲ ಕಳೆದರೂ ಅಪಾಯಕಾರಿಯಾಗಿರುವ ಕಂಬವನ್ನು ತೆರವುಮಾಡುವ ಕಾರ್ಯ ನಡೆದಿಲ್ಲ ಎಂಬುದು ಸ್ಥಳೀಯರ ಆರೋಪ.
ಒಂದು ವೇಳೆ ಕಂಬ ಸಂಪೂರ್ಣ ಅಡ್ಡ ಬಿದ್ದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಮಾಡುವ ವಾಹನಗಳಿಗೆ ಬಿದ್ದು ಪ್ರಾಣ ಹಾನಿಯಾಗುವ ಸಂಭವವು ಇದೆ.ಆದರೆ ಇಲ್ಲಿನ ಮೆಸ್ಕಾಂ ಇಲಾಖೆ ಕಣ್ಣಿದ್ದು ಕುರುಡಾಗಿದೆ. ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಹೋಗಿದ್ದಾರೆ. ಆದರೆ ಈ ವರೆಗೆ ಕಂಬವನ್ನು ಬದಲಾವಣೆ ಮಾಡುವ ಕಾರ್ಯ ನಡೆದಿಲ್ಲ ಎಂದು ಆರೋಪ ಕೇಳಿ ಬಂದಿದೆ. ಏನೇ ಇರಲಿ ಕಂಬ ಉರುಳಿಬಿದ್ದು ಪ್ರಾಣ ಹಾನಿಯಾಗುವ ಮೊದಲು ಕಂಬವನ್ನು ಬದಲಾಯಿಸಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.