BANTWAL
ಸಹಜ ಸ್ಥಿತಿಯತ್ತ ಬಂಟ್ವಾಳದ ಬಿಸಿ ರೋಡ್ – ಪರಿಸ್ಥಿತಿ ನಿಯಂತ್ರಿಸುವಲ್ಲಿ ಪೊಲೀಸರು ಯಶಸ್ವಿ
ಬಂಟ್ವಾಳ ಸೆಪ್ಟೆಂಬರ್ 16: ಪ್ರಚೋದನಕಾರಿ ಆಡಿಯೋ ಬೆನ್ನಲ್ಲೇ ಹಿಂದೂ ಸಂಘಟನೆಗಳು ಕರೆಕೊಟ್ಟಿದ್ದ ಬಿಸಿ ರೋಡ್ ಚಲೋ ಶಾಂತಿಯುತವಾಗಿ ನಡೆದಿದೆ. ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ನಡೆದ ಬಿ.ಸಿ ರೋಡ್ ಚಲೋ ಹಾಗೂ ಈದ್ ಮಿಲಾದ್ ಮೆರವಣಿಗೆ ಶಾಂತಿಯುತವಾಗಿ ನಡೆದಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿ ಗಿರೀಶ್.ಎನ್ ತಿಳಿಸಿದ್ದಾರೆ.
ಬಜರಂಗದಳ ಹಾಗೂ ವಿಹೆಚ್‌ಪಿಯಿಂದ ಬಿ.ಸಿ ರೋಡ್ ಚಲೋ ಕರೆ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ ರೋಡ್‌ನಲ್ಲಿ ಜಮಾಯಿಸಿದ್ದರು. ಬಜರಂಗದಳ ಹಾಗೂ ವಿಹೆಚ್‌ಪಿಯ ಕಾರ್ಯಕರ್ತರ ನಡುವೆ ತಳ್ಳಾಟ ನೂಕಾಟ ನಡೆದಿತ್ತು. ಕೊನೆಗೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಸ್ಪಿ ಎನ್.ಯತೀಶ್ ಮಾತನಾಡಿ, ಕೈಕಂಬ ಮಸೀದಿಯ ಈದ್ ಮಿಲಾದ್ ಮೆರವಣಿಗೆ ಮಾರ್ಗ ಬದಲಿಸಿಲ್ಲ. ಹಿಂದೂ ಸಂಘಟನೆಗಳು ಶಾಂತಿಯುತ ಧರಣಿ ನಡೆಸುತ್ತೇವೆಂದಿದ್ದರು. ಹಾಗಾಗಿ ಬಿ.ಸಿ.ರೋಡ್ ಜಂಕ್ಷನ್ನಲ್ಲಿ ಅವಕಾಶ ನೀಡಿದ್ದೇವೆ. ಏನಾದರೂ ಸಮಸ್ಯೆಯಾದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದೇವೆ. ಈವರೆಗೂ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಮುಂದೆಯೂ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಬಿ.ಸಿ.ರೋಡ್‌ನಲ್ಲಿ ಹೆಚ್ಚುವರಿ ಭದ್ರತೆ ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು. ಬಿಸಿ ರೋಡ್‌ನಲ್ಲಿ ಕೆ.ಎಸ್.ಆರ್.ಪಿ ತುಕಡಿಗಳು, ಆರ್ಮ್ ರಿಸರ್ವ್ ಫೋರ್ಸ್ ಸೇರಿದಂತೆ ವಿವಿಧ ತುಕಡಿಗಳ ಮುಕ್ಕಾಂ ಹೂಡಿವೆ. ಪರಸ್ಪರ ಪ್ರಚೋದನಕಾರಿ ಹೇಳಿಕೆಯಿಂದ ಉದ್ವಿಗ್ನಗೊಂಡಿದ್ದ ಪರಿಸ್ಥಿತಿಯನ್ನು ಶಾಂತಗೊಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.