BANTWAL
ಬಂಟ್ವಾಳ ತಾಲೂಕಿನ ಕೊರಗ ಸಮುದಾಯದ ಕುಂದುಕೊರತೆಗಳ ಸಭೆ- ತುಳುವಿನಲ್ಲೇ ನಡೆದ ಸಭೆ
ಬಂಟ್ವಾಳ ಸೆಪ್ಟೆಂಬರ್ 15: ಬಂಟ್ವಾಳ ತಾಲೂಕಿನ ಕೊರಗ ಸಮುದಾಯದ ಕುಂದುಕೊರತೆಗಳ ಸಭೆ ಬಿಸಿರೋಡಿನ ತಾ.ಪಂ.ನ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ತಾ.ಪಂ. ಪ್ರಭಾರ ಇ.ಒ.ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
2007 ರಲ್ಲಿ ಸಾಗುವಳಿ ಚೀಟಿ ನೀಡಿದ ಭೂಮಿಗಳ ಗಡಿಗುರುತು ಮಾಡಬೇಕು. ಭೂಮಿ ನೀಡಿದ ಇಲಾಖೆ ಪುನರ್ವಸತಿ ನೀಡುವ ಕಾರ್ಯಗಳು ಬಾಕಿಯಿದೆ. ಶೀಘ್ರವಾಗಿ ಪುನರ್ವಸತಿ ಕಾರ್ಯ ಆಗಬೇಕು. ಎಲ್ಲಾ ಮೂಲಭೂತ ಸೌಕರ್ಯಗಳನ್ನು ನೀಡಿದರೆ ಮಾತ್ರ ಸಮುದಾಯಕ್ಕೆ ಜೀವನ ಮಾಡಲು ಸಾಧ್ಯವಿದೆ ಎಂದು ಅವರು ತಿಳಿಸಿದರು.ಭೂಮಿಯ ಮಾಲೀಕತ್ವವನ್ನು ನೀಡದೆ ನಮಗೆ ಯಾವುದೇ ಸವಲತ್ತುಗಳನ್ನು ಪಡೆಯಲು ಸಾಧ್ಯವಿಲ್ಲ. ಹಿರಿಯರು ಮರಣಹೊಂದಿರುವ ಅನೇಕ ಕೊರಗ ಕುಟುಂಬಗಳ ಭೂಮಿಯನ್ನು ಮನೆಯ ಇತರರ ಹೆಸರಿಗೆ ಖಾತೆ ಪರಿವರ್ತನೆ ಮಾಡುವ ಕಾರ್ಯ ಇಲಾಖೆಗಳಿಂದ ನಡೆದಿಲ್ಲ. ಇದರಿಂದ ಸರಕಾರದ ಯಾವುದೇ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸುಂದರ ಬೆಳುವಾಯಿ ಅಧಿಕಾರಿಗಳ ಗಮನಕ್ಕೆ ತಂದರು.
ಮೆಸ್ಕಾಂ ಮೀಟರ್ ರೀಡ್ ಮಾಡುವವರು ಮನೆಗೆ ಬರುವುದಿಲ್ಲ,ಬಿಲ್ ಕೂಡ ನೀಡುವುದಿಲ್ಲ, ಕೇಳಿದರೆ ನಾಯಿ ಯಿದೆ ಎಂದು ಹೇಳುತ್ತಾರೆ.ಆದರೆ ನಮ್ಮ ಮನೆಯಲ್ಲಿ ನಾಯಿಯೇ ಇಲ್ಲ ಎಂದು ಅವರು ಮೆಸ್ಕಾಂ ಅಧಿಕಾರಿಯವರಲ್ಲಿ ದೂರಿದರು. ಹಿರಿಯರ ಜಮೀನನ್ನು ಬಲಾಢ್ಯರು ವಶಪಡಿಸಿಕೊಂಡಿರುವ ಬಗ್ಗೆ ಕಂದಾಯ ಇಲಾಖೆಗೆ ದೂರು ನೀಡಿದ್ದು, ಅ ಜಮೀನನ್ನು ನಮಗೆ ವಾಪಸು ತೆಗೆಸಿಕೊಡಿ ಎಂದು ಕಂದಾಯ ಇಲಾಖೆಗೆ ಅನೇಕ ಬಾರಿ ಮನವಿ ನೀಡುತ್ತಾ ಬಂದಿದ್ದೇನೆ,ಆದರೆ ಇಲಾಖೆ ಯಾವುದೇ ಸ್ಪಂದನೆ ನೀಡುತ್ತಿಲ್ಲ. ಇದು ಅಧಿಕಾರಿಗಳ ಯಾವ ನ್ಯಾಯ , ಅಳಿವಿನಂಚಿಗೆ ಸರಿದಿರುವ ಸಮುದಾಯದ ಉಳಿಸುವುದಕ್ಕೆ ಅಧಿಕಾರಿಗಳು ನೀಡುವ ಕಾರ್ಯ ಇದೇನಾ? ಎಂದು ಪ್ರಶ್ನಿಸಿದರು.
ಕೇರಳ ಗಡಿಭಾಗದಿಂದ ಕರ್ನಾಟಕಕ್ಕೆ ಮದುವೆ ಆಗಿ ಬಂದ ವ್ಯಕ್ತಿಗಳಿಗೆ ಜಾತಿ ಸರ್ಟಿಫಿಕೇಟ್ ನೀಡಲು ಸಾಧ್ಯವಿದೆಯಾ? ಯಾವೆಲ್ಲಾ ದಾಖಲೆಗಳನ್ನು ನೀಡಬೇಕು ಎಂದು ಸುಂದರಿ ಕನ್ಯಾನ ಅಧಿಕಾರಿಗಳಲ್ಲಿ ಪ್ರಶ್ನಿಸಿದರು. ಕೇರಳ ಗಡಿಭಾಗದ ಜಾತಿ ಸರ್ಟಿಫಿಕೇಟ್ ಹೊರತು ಪಡಿಸಿ ಉಳಿದ ಎಲ್ಲಾ ಸೌಕರ್ಯಗಳನ್ನು ನೀಡಲಾಗುತ್ತದೆ ಆದರೆ ಕರ್ನಾಟಕ ಮತ್ತು ಕೇರಳ ರಾಜ್ಯದ ಕೆಲವೊಂದು ನಿಯಮಗಳಿಗೆ ಅನುಸಾರವಾಗಿ ಜಾತಿ ಪ್ರಮಾಣ ಪತ್ರ ನೀಡಲು ಅಸಾಧ್ಯ ಎಂದು ಕಂದಾಯ ಅಧಿಕಾರಿ ನವೀನ್ ಬೆಂಜನಪದವು ತಿಳಿಸಿದರು.
ಆದ್ಯತೆಯಲ್ಲಿ ಕೊರಗ ಸಮುದಾಯವನ್ನು ಅಧಿಕಾರಿಗಳು ಪರಿಗಣನೆ ಮಾಡಬೇಕು ,ಅಳಿವಿನಂಚಿಗೆ ಸಾಗುತ್ತಿರುವ ಪೀಳಿಗೆಯನ್ನು ಉಳಿಸುವ ನಿಟ್ಟಿನಲ್ಲಿ ಸಹಕಾರ ನೀಡಬೇಕು ಎಂದು ಸಭೆಯಲ್ಲಿ ತಿಳಿಸಿದರು.
ಬಿಸಿರೋಡಿನ ತಾ.ಪಂ.ಸಭಾಂಗಣದಲ್ಲಿ ನಡೆದ ಕೊರಗರ ಕುಂದುಕೊರತೆಗಳ ಸಭೆಯಲ್ಲಿ ಬಹುಪಾಲು ಚರ್ಚೆ ತುಳುವಿನಲ್ಲಿ ನಡೆಯಿತು. ಕೊರಗ ಜನಾಂಗದ ಬಹುತೇಕರು ತುಳುವಿನಲ್ಲಿ ಸಮಸ್ಯೆಯನ್ನು ಹೇಳಿಕೊಂಡಾಗ ಸ್ಪಂದಿಸಿದ ಅಧಿಕಾರಿಗಳು ಕೂಡ ಅವರಿಗೆ ಸರಿಯಾಗಿ ಮಾಹಿತಿ ಲಭ್ಯವಾಗಬೇಕು ಎಂಬ ನಿಟ್ಟಿನಲ್ಲಿ ತುಳುವಿನಲ್ಲಿಯೇ ಉತ್ತರಿಸಿದ ಘಟನೆ ನಡೆಯಿತು.
ಆರಂಭದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಅವರು ಕನ್ನಡ ದಲ್ಲಿ ಇಲಾಖೆಯ ಮಾಹಿತಿ ನೀಡಿದರು. ಅ ಬಳಿಕ ಸಮುದಾಯದವರು ತುಳುವಿನಲ್ಲಿ ಸಮಸ್ಯೆಗಳನ್ನು ಹೇಳಿಕೊಂಡಾಗ ಅವರ ಸಮಸ್ಯೆಗಳಿಗೆ ತುಳುವಿನಲ್ಲಿಯೇ ಉತ್ತರಿಸಿದರು.