BANTWAL
ಬಂಟ್ವಾಳ: ನಿಲ್ಲಿಸಿದ್ದ ಟೆಂಪೋ ಚಲಿಸಿ 3 ವರ್ಷದ ಮಗು ಧಾರುಣ ಸಾವು
ಬಂಟ್ವಾಳ ನವೆಂಬರ್ 07: ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಟೆಂಪೋ ಮುಂದಕ್ಕೆ ಚಲಿಸಿ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವಿಗೆ ಢಿಕ್ಕಿ ಹೊಡೆದ ಪರಿಣಾಮ ಮೂರರ ಹರೆಯದ ಮಗು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆಯೊಂದು ಬಂಟ್ವಾಳದ ಲೊರೆಟ್ಟೊಪದವಿನಲ್ಲಿ ನಡೆದಿದೆ,
ಮೃತ ಮಗುವನ್ನು ಫರಂಗಿಪೇಟೆ ಸಮೀಪದ 10ನೇ ಮೈಲಿಗಲ್ಲು ಉನೈಸ್ ಎಂಬವರ ಪುತ್ರಿ ಆಶಿಕ (3) ಎಂದು ಗುರುತಿಸಲಾಗಿದೆ.
ಮಗು ಲೊರೆಟ್ಟೋಪದವಿನ ತನ್ನ ಅಜ್ಜಿಯ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಸಂದರ್ಭ ಮನೆಯ ಮುಂಭಾಗ ದುರ್ಘಟನೆ ನಡೆದಿದೆ. ಉನೈಸ್ ಅವರ ಪತ್ನಿಯ ತಾಯಿ ಮನೆ ಲೊರೆಟ್ಟೋಪದವಿನಲ್ಲಿದ್ದು, ಮನೆಯ ಹೊರಗೆ ಮಗು ಆಡುತ್ತಿತ್ತು. ಈ ವೇಳೆ ಅಂಗಳದಲ್ಲಿ ನಿಲ್ಲಿಸಿದ್ದ ಮಗುವಿನ ತಾಯಿಯ ಸಹೋದರನ ಟೆಂಪೋ ಏಕಾಏಕಿ ಹಿಂದಕ್ಕೆ ಬಂದಿದೆ.
ನಿಲ್ಲಿಸಿದ್ದ ಟೆಂಪೋವಿನ ಗೇರ್ ಅನ್ನು ಮಕ್ಕಳು ಎಳೆದಿದ್ದು, ಈ ವೇಳೆ ಟೆಂಪೊ ಕೆಳಗೆ ಚಲಿಸಿ ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮಗುವಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ. ಗಂಭೀರ ಗಾಯಗೊಂಡ ಮಗುವನ್ನು ತತ್‌ಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿಲ್ಲ. ಘಟನೆಯ ಕುರಿತು ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.