BANTWAL
ಬಂಟ್ವಾಳ – ಮಹಿಳೆಗೆ ಸಹಾಯ ಮಾಡಿದ್ದಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
ಬಂಟ್ವಾಳ ಡಿಸೆಂಬರ್ 15: ಬಸ್ ನಲ್ಲಿ ರಶ್ ಇದ್ದ ಕಾರಣ ಮಹಿಳೆಯ ಬ್ಯಾಗ್ ಹಿಡಿದುಕೊಂಡಿದ್ದ ಮುಸ್ಲಿಂ ಯುವಕನ ಮೇಲೆ ತಂಡವೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಬಂಟ್ವಾಳ ರಾಯಿ ಎಂಬಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಮೂಲರಪಟ್ನ ನಿವಾಸಿ ಇಸಾಕ್ (45) ಎಂದು ಗುರುತಿಸಲಾಗಿದೆ. ಮೇಸ್ತ್ರಿ ಕೆಲಸ ಮಾಡುತ್ತಿರುವ ಈತ ಬುಧವಾರ ಬೆಳಗ್ಗೆ ಬಿ.ಸಿ.ರೋಡ್ನಿಂದ ಮೂಡಬಿದ್ರೆಗೆ ಖಾಸಗಿ ಬಸ್ನಲ್ಲಿ ಹೋಗುತ್ತಿದ್ದರು. ಬಸ್ ನಲ್ಲಿ ರಶ್ ಇದ್ದಕಾರಣ ಮಹಿಳೆಯೊಬ್ಬರು ಇಸಾಕ್ ಬಳಿ ಬ್ಯಾಗ್ ಹಿಡಿದುಕೊಳ್ಳುವಂತೆ ವಿನಂತಿಸಿದ್ದಾರೆ. ಬಳಿಕ ತಾನು ಇಳಿಯುವ ಜಾಗ ಬಂದಾಗ ಇಸಾಕ್ ರಿಂದ ಬ್ಯಾಗ್ ಪಡೆದು ತೆರಳಿದ್ದಾರೆ. ಆದರೆ ಈ ವೇಳೆ ಬಸ್ ಕಂಡಕ್ಟರ್ ಇಸಾಕ್ ಬಳಿ ಬಂದು ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ್ದೀರಿ ಎಂದು ಹಲ್ಲೆ ನಡೆಸಿದ್ದಾನೆ.
ಅಲ್ಲದೆ ಹಲ್ಲೆ ವೇಳೆ ಬಸ್ ಕಂಡಕ್ಟರ್ ಕೆಲವರಿಗೆ ಮೊಬೈಲ್ನಲ್ಲಿ ಕರೆ ಮಾಡಿ ಕೆಲವು ಯುವಕರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಬಳಿಕ ಕಂಡಕ್ಟರ್ ಯುವಕರ ಗುಂಪಿಗೆ ಇಸಾಕ್ರನ್ನು ಹಸ್ತಾಂತರಿಸಿದ್ದಾರೆ.ಆ ಯುವಕರ ಗುಂಪು ಇಸಾಕ್ರನ್ನು ರಿಕ್ಷಾದಲ್ಲಿ ಕರೆದುಕೊಂಡು ಹೋಗಿ ರಾಯಿ ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿ ಮರಕ್ಕೆ ಕಟ್ಟಿ ಹಾಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ ಎನ್ನಲಾಗಿದೆ. ಇಸಾಕ್ ತೀವ್ರ ಅಸ್ವಸ್ಥರಾದ ಮೇಲೆ ಯುವಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರು ಇಸಾಕ್ರನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿ ಠಾಣೆಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.