Connect with us

    BANTWAL

    ಬಂಟ್ವಾಳದಲ್ಲಿ ಕೋಳಿ ಗಲಾಟೆ ಬೆನ್ನಿಗೆ ಇದೀಗ ಸರ್ಕಾರಿ ಬಸ್‌ನಲ್ಲಿ ಎಣ್ಣೆ ಗಲಾಟೆ..!

    ಬಂಟ್ವಾಳ : ಮೊನ್ನೆ ಮೊನ್ನೆ ಕೋಳಿ ಮಾಂಸ ಹಿಡಿದು ಬಸ್ ನಲ್ಲಿ ಪ್ರಯಾಣಿಸಿದ ಪ್ರಯಾಣಿಕನನ್ನು ಠಾಣೆಯಲ್ಲಿ ಇಳಿಸಿ ರಾದ್ದಾಂತ ಮಾಡಿದ ಪ್ರಕರಣದ ನೆನಪು ಮಾಸುವ ಮುನ್ನ ಬಿಸಿರೋಡಿನಲ್ಲಿ ಮತ್ತೊಂದು ಪ್ರಕರಣ ನಡೆದಿದೆ.

    ತೆಂಗಿನ ಎಣ್ಣೆಯನ್ನು ಹಿಡಿದುಕೊಂಡು ಬಸ್ ನಲ್ಲಿ ಪ್ರಯಾಣಿಸುವ ಮಹಿಳೆಯನ್ನುಬಸ್ ನಿರ್ವಾಹಕ ಇಳಿಸಿದ ಘಟನೆ ನಡೆದಿದೆ.ಮಂಗಳೂರು – ಹಾಸನ ಬಸ್ ನಲ್ಲಿ ಮಂಗಳೂರಿನಿಂದ ಹಾಸನ ಕ್ಕೆ ಪ್ರಯಾಣಿಕೆಯೋರ್ವರು ಪ್ರಯಾಣ ಬೆಳೆಸಿದ್ದರು.

    ಬಸ್ ಹತ್ತಿದ ಮಹಿಳೆಯ ಕೈಯಲ್ಲಿ ಚೀಲವೊಂದಿದ್ದು,ಅದರಲ್ಲಿ ಮೂರು ಕ್ಯಾನ್ ತೆಂಗಿನ ಎಣ್ಣೆ ಇತ್ತು.ಮಂಗಳೂರಿನಿಂದ ಸಂಬಂಧಿಕರ ಮನೆಗೆ ಪ್ರಯಾಣಿಸುವ ಮಹಿಳೆ ಶುಧ್ದ ತೆಂಗಿನ ಎಣ್ಣೆಯನ್ನು ಕೊಂಡು ಹೋಗುತ್ತಿದ್ದರು.

    ಆದರೆ ಬಸ್ ನಿರ್ವಾಹಕ ಟಿಕೆಟ್ ಪಡೆಯಲು ಬಂದಾಗ ತೆಂಗಿನ ಎಣ್ಣೆಯನ್ನು ನೋಡಿ ಇದು ಏನಮ್ಮಾ ಅಂತ ಕೇಳಿದ್ದಾರೆ.‌‌‌ ಮೇಲ್ನೋಟಕ್ಕೆ ತೆಂಗಿನ ಎಣ್ಣೆ ಎಂಬುದು ಖಾತ್ರಿಯಾದರೂ ಕಂಡಕ್ಟರ್ ಮಹಿಳೆಯನ್ನು ಪ್ರಶ್ನಿಸಿದಾಗ ಅವರು ಕೋಪದಲ್ಲಿ ಇದು ಬಾಂಬ್ ಅಂತ ಹೇಳಿದ್ದಾರೆ.

    ಆದರೆ ಯಾವುದೇ ಆಯಿಲ್ ಪದಾರ್ಥಗಳನ್ನು ಬಸ್ ನಲ್ಲಿ ಕೊಂಡು ಹೋಗುವಂತಿಲ್ಲ ಎಂದು ಮಹಿಳೆಯಲ್ಲಿ ನಿರ್ವಾಹಕ ವಾಗ್ವಾದ ನಡೆಸಿದ್ದಾನೆ. ಆದರೆ ಮಹಿಳೆ ಇವರ ಮಾತನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಆದರೆ ಪಟ್ಟು ಬಿಡದ ಕಂಡೆಕ್ಟರ್ ಮಂಗಳೂರಿನಿಂದ ಬಿಸಿರೋಡು ತಲುಪುತ್ತಿದ್ದಂತೆ ಮಹಿಳೆಯನ್ನು ಒತ್ತಾಯ ಪೂರ್ವಕ ಇಳಿಸಿದ್ದಾನೆ.
    ಆದರೆ ಮಹಿಳೆ ನನಗೆ ನ್ಯಾಯ ಬೇಕು ಅಂತ ಸಂಚಾರ ನಿರ್ವಾಹಣೆಗಾಗಿ ಬಿಸಿರೋಡು ಬಸ್ ನಿಲ್ದಾಣದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಟ್ರಾಫಿಕ್ ಪೋಲೀಸ್ ಸಿಬ್ಬಂದಿ ವಿವೇಕ್ ರೈ ಅವರಲ್ಲಿ ಮನವಿ ಮಾಡಿಕೊಂಡರು.
    ಮಹಿಳೆ ಬಸ್ ನಿಂದ ಇಳಿದಿದ್ದಾರೆ ಆದರೂ ಎಣ್ಣೆ ಕ್ಯಾನ್ ಮಾತ್ರ ಬಸ್ ನೊಳಗೆ ಇತ್ತು. ಮಧ್ಯ ವಯಸ್ಸಿನ ಒಂಟಿ ಮಹಿಳೆಯಾಗಿರುವುದರಿಂದ ಬಸ್ ನಿಂದ ಇಳಿಸಿದ ಕಂಡಕ್ಟರ್ ನ ವರ್ತನೆ ಸರಿ ಕಾಣದೆ ಸಾರ್ವಜನಿಕರು ಕೂಡ ಜಮಾಯಿಸಿದ್ದರು.
    ಮಹಿಳೆ ನೀಡಿದ ದೂರಿನಂತೆ ಟ್ರಾಫಿಕ್ ಪೋಲೀಸ್ ವಿವೇಕ್ ಅವರು ಬಸ್ ಚಾಲಕನಲ್ಲಿ ಬಸ್ ನ್ನು ಬದಿಗೆ ಸರಿಸಿ‌ ಸ್ವಲ್ಪ ಕಾಲ ನಿಲ್ಲುವಂತೆ ಕೇಳಿಕೊಂಡರು. ಬಳಿಕ ಘಟನೆಯಿಂದ ಮಹಿಳೆಗೆ ತೊಂದರೆಯಾಗುತ್ತದೆ ಎಂಬುದನ್ನು ಕಂಡೆಕ್ಟರ್ ಅವರಿಗೆ ತಿಳಿಸಿದರು.
    ಜೊತೆಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯ ಎಸ್.ಐ.ರಾಮಕೃಷ್ಣ ಅವರ ಗಮನಕ್ಕೆ ತಂದಿದ್ದಾರೆ.
    ಅವರು ಪೋನ್ ಮೂಲಕ ನಿರ್ವಾಹಕನಿಗೆ ಬುದ್ದಿ ಮಾತು ಹೇಳಿದ್ದಲ್ಲದೆ ಸಂತ್ರಸ್ತ ಮಹಿಳೆಯನ್ನು ಅದೇ ಬಸ್ ನಲ್ಲಿ ತೆಂಗಿನ ಎಣ್ಣೆ ಸಹಿತ ಹಾಸನಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
    ಸರಕಾರಿ ಬಸ್ ನಲ್ಲಿ ಯಾವ ವಸ್ತುಗಳನ್ನು ಕೊಂಡು ಹೋಗಬಹುದು? ಯಾವುದನ್ನು ಕೊಂಡು ಹೋಗುವಂತಿಲ್ಲ ಎಂಬುದರ ಬಗ್ಗೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್ ನ ಹೊರಗಡೆ ಅಥವಾ ಡಿಪೋ ಗಳಲ್ಲಿ ಜನರಿಗೆ ಮುಟ್ಟುವಂತೆ ಜಾಹೀರಾತುಗಳನ್ನು ಹಾಕಬೇಕು ಎಂಬುದು ಪ್ರಯಾಣಿಕರ ಒತ್ತಾಯವಾಗಿದೆ.
    ಕೆ.ಎಸ್.ಆರ್.ಟಿ.ಸಿ.ನಿಗಮದ ನಿಯಮಗಳಿಂದ ಬಡವರ ಪಾಲಿಗೆ ಅಂತೂ ಬಸ್ ಪ್ರಯಾಣ ಎಂಬುದು ದುಸ್ತರವಾಗಿ ಬಿಡುತ್ತದೆ.
    ಸರಕಾರದ ಪ್ರತಿಯೊಂದು‌ಸೌಲಭ್ಯಗಳು ಬಡ ಜನರ ಜೀವನಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಮಾಡಿರುವುದಾಗಿದ್ದರೂ ಕೂಡ ಇಂತಹ ಜನವಿರೋಧಿ ನಿಯಮಗಳಿಂದ ಬಡವರಿಗೆ ತೊಂದರೆಯಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದೆ. ಕರಾವಳಿ ಭಾಗದಿಂದ ಆಯ್ಕೆಯಾದ ಶಾಸಕರುಗಳು ಈ ಬಗ್ಗೆ ಸಚಿವರ ಜೊತೆ ಮಾತನಾಡಿ ನಿಯಮಗಳನ್ನು ಸಡಿಲಿಕೆ ಮಾಡಲು ಒತ್ತಡ ಹಾಕಬೇಕು ಎಂಬುದು ಸಾರ್ವಜನಿಕ ಆಗ್ರಹವಾಗಿದೆ.

     

     

    Share Information
    Advertisement
    Click to comment

    You must be logged in to post a comment Login

    Leave a Reply