ನಗರದಲ್ಲಿ ರಾರಾಜಿಸುತ್ತಿರುವ “ಚರಂಡಿಯ ಟಾಯ್ಲೆಟ್ ನೀರನ್ನೇ ಫಿಲ್ಟರ್ ಮಾಡಿ ಕುಡಿಯುವಂತೆ ಮಾಡಿದ ಜಿಲ್ಲೆಯ ನಾಯಕರಿಗೆ ಸ್ವಾಗತ” ಕೋರುವ ಬ್ಯಾನರ್

ಮಂಗಳೂರು ಮೇ 13: ಕುಡಿಯುವ ನೀರಿನ ಅಭಾವ ಎದುರಿಸುತ್ತಿರುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜನಪ್ರತಿನಿಧಿಗಳಿಗೆ ಹಾಗೂ ಎತ್ತಿನಹೊಳೆ ಯೋಜನೆಯ ರೂವಾರಿಗಳಿಗೆ ಅಭೂತಪೂರ್ವ ಸ್ವಾಗತ ಕೋರುವ ಬ್ಯಾನರ್ ಗಳು ಮಂಗಳೂರಿನ ನಗರದಲ್ಲಿ ರಾರಾಜಿಸುತ್ತಿದೆ.

ನೀರಿನ ತೀವ್ರ ಅಭಾವ ಎದುರಿಸುತ್ತಿರುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈಗ ನೀರು ಪೂರೈಕೆ ವ್ಯವಸ್ಥೆ ರೇಷನಿಂಗ್ ವ್ಯವಸ್ಥೆಗೆ ಬಂದಿದೆ. ಕಳೆದ ಬಾರಿ ಮಳೆಗಾಲದಲ್ಲಿ ಹೆಚ್ಚು ಮಳೆ ಸುರಿದರು, ಹೊಸ ಡ್ಯಾಂ ನಲ್ಲಿ ಹೆಚ್ಚು ನೀರು ಸಂಗ್ರಹಿಸಿದರೂ ಕೂಡ ನಗರಕ್ಕೆ ನೀರು ಪೂರೈಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ನಡುವೆ ಜಿಲ್ಲೆಯ ಜೀವನದಿ ನೇತ್ರಾವತಿಯಿಂದ ನೀರನ್ನು ಚಿಕ್ಕಬಳ್ಳಾಪುರ , ಕೋಲಾರ ಜಿಲ್ಲೆಗಳಲ್ಲಿ ಹರಿಸಲು ಎತ್ತಿನಹೊಳೆ ಯೋಜನೆ ರೂಪಿಸಿದ್ದ ಜಿಲ್ಲೆಯ ಜನಪ್ರತಿನಿಧಿಗಳಿಗೆ ಸ್ವಾಗತಕೋರುವ ಬ್ಯಾನರ್ ಗಳನ್ನು ನಗರದ ಪ್ರಮುಖ ಸ್ಥಳಗಲ್ಲಿ ಆಳಡಿಸಲಾಗಿದೆ.

ಜಿಲ್ಲೆಯ ಜನರಿಂದ ಮತ ಪಡೆದು ಶಾಸಕರು ಮತ್ತು ಸಚಿವರಾಗಿ ಆಯ್ಕೆ ಆದ ಜನ ಪ್ರತಿನಿಧಿಗಳಿಗೆ ಎಚ್ಚರಿಕೆಯ ಕರೆಗಂಟೆಯನ್ನ ಜಿಲ್ಲೆಯ ಜನರು ನೀಡಿದ್ದಾರೆ.

ಎತ್ತಿನಹೊಳೆ ಯೋಜನೆಯ ರೂವಾರಿಗಳಾದ ಜಿಲ್ಲೆಯ ನಾಯಕರುಗಳಾದ ಕೇಂದ್ರ ಸಚಿವ ಸದಾನಂದ ಗೌಡ ಹಾಗೂ ಕಾಂಗ್ರೆಸ್ ಹಿರಿಯ ನಾಯಕ , ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿಯವರ ಫೋಟೋ ಹಾಕಿ ‘13000 ಕೋಟಿ ರೂಪಾಯಿ ಕಮಿಷನ್ ಆಸೆಗೆ ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿಯನ್ನು ಪಶ್ಚಿಮ ಘಟ್ಟಗಳ ಸಮೇತ ಸರ್ವನಾಶ ಮಾಡಿ ಜಿಲ್ಲೆಯ ಜನರು ಚರಂಡಿಯ ಟಾಯ್ಲೆಟ್ ನೀರನ್ನೇ ಫಿಲ್ಟರ್ ಮಾಡಿ ಕುಡಿಯುವಂತೆ ಮಾಡಿದ ದಕ್ಷಿಣ ಕನ್ನಡ ಜಿಲ್ಲೆಯ ಕುಲ ಪುತ್ರರಾದ ವೀರಪ್ಪ ಮೊಯಿಲಿ ಹಾಗೂ ಸದಾನಂದ ಗೌಡರಿಗೆ ಜಿಲ್ಲೆಯ ಪ್ರಶ್ನೆ ಮಾಡದ , ನಿದ್ರೆಯಲ್ಲಿರುವ ಪ್ರಜೆಗಳಿಂದ ಹಾರ್ದಿಕ ಸ್ವಾಗತ ‘ ಎಂದು ಬ್ಯಾನರ್ ನಲ್ಲಿ ಹಾಕಲಾಗಿದೆ.

ಇನ್ನೊಂದು ಬ್ಯಾನಲ್ ನಲ್ಲಿ ಜಿಲ್ಲೆಯ 7 ಶಾಸಕರ ಫೋಟೋ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಫೋಟೋ ಇರುವ ಬ್ಯಾನರ್ ನಲ್ಲಿ,’ ನಿಮ್ಮನ್ನ ಜಿಲ್ಲೆಯ ಜನರು ಮತ ಹಾಕಿ ಚುನಾಯಿಸಿದ್ದು 40 ಲಕ್ಷ ರೂಪಾಯಿ ಕಾರಲ್ಲಿ ಶೋಕಿ ಮಾಡಲು ಅಲ್ಲ. ಎಂದು ಕಟು ಶಬ್ಧಗಳಲ್ಲಿ ವ್ಯಾಖ್ಯಾನಿಸಿ, ಮೊದಲು ಎತ್ತಿನ ಹೊಳೆ ಯೋಜನೆಯನ್ನು ನಿಲ್ಲಿಸುವಂತೆ ವಿಧಾನಸಭೆಯಲ್ಲಿ ಧರಣಿ ಮಾಡಿ, ಇಲ್ಲವಾದಲ್ಲಿ ಕೂಡಲೇ ರಾಜಿನಾಮೆ ಕೊಟ್ಟು ಅಮರಣಾಂತ ಉಪವಾಸ ಕುಳಿತುಕೊಳ್ಳಿ. ನೀವು ನಿಜವಾದ ಜನ ಸೇವಕರು ಎಂಬುವುದನ್ನು ಸಾಬೀತುಪಡಿಸಿ ಎಂದು ಬರೆಯಲಾಗಿದೆ.

ವಿಶೇಷವಾಗಿ ಮಂಗಳೂರು ಮಹಾನಗರ ಪಾಲಿಕೆಗೆ ಎಚ್ಚರಿಕೆಯನ್ನ ನೀಡಿದ್ದು, ನಗರದಲ್ಲಿ ಅನಧಿಕೃತ ಫ್ಲೆಕ್ಸ್‍ಗಳನ್ನು ತೆರವುಗೊಳಿಸದ ಹೊರತು , ಈ ಫ್ಲೆಕ್ಸ್‍ಗಳನ್ನು ತೆರವು ಮಾಡಿದರೆ ಕಾಲಿನಲ್ಲಿದ್ದನ್ನು ಕೈಗೆ ತೆಗೆದು ಕೊಳ್ಳಬೇಕಾದೀತು ಎಂದು ಎಚ್ಚರಿಕೆ ನೀಡಲಾಗಿದೆ.