KARNATAKA
ಮುಳುಗಿದ ಐಟಿ ಸೆಂಟರ್ ಬೆಂಗಳೂರು….!!

ಬೆಂಗಳೂರು ಸೆಪ್ಟೆಂಬರ್ 05: ಮೇಫಸ್ಪೋಟಕ್ಕೆ ಬೆಂಗಳೂರು ಸಂಪೂರ್ಣ ನಲುಗಿ ಹೋಗಿದ್ದು, ಭಾನುವಾರ ರಾತ್ರಿ ಸುರಿದ ಮಳೆಗೆ ಅರ್ಧ ಬೆಂಗಳೂರು ನೀರಿನಲ್ಲಿ ಮುಳುಗಿದೆ.
ನಿನ್ನೆ ರಾತ್ರಿ 10 ಗಂಟೆಯಿಂದಲೂ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಬೆಂಗಳೂರಿನ ಹಲವು ಬಡಾವಣೆಗಳು ಮಳೆ ನೀರಿನಿಂದ ಜಲಾವೃತಗೊಂಡಿದ್ದರೆ, ಹಲಸೂರು, ಜೀವನ್ ಭೀಮಾ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಬೆಳ್ಳಂದೂರ ಕ್ರಾಸ್ ಜಲಾವೃತಗೊಂಡಿದೆ.ಮೆಜೆಸ್ಟಿಕ್ ಸುತ್ತಮುತ್ತ ಕೆರೆಯಂತಾಗಿದ್ದವು.

ಕಳೆದ ರಾತ್ರಿ ಬೆಂಗಳೂರಿನಲ್ಲಿ 131.6 ಮಿಲಿ ಮೀಟರ್ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. ಮಹಾಲಕ್ಷ್ಮೀ ಲೇಔಟ್ನ ತರಕಾರಿ ಮಾರ್ಕೆಟ್ ಬಳಿ ಎರಡು ಬೃಹತ್ ಮರಗಳು ಕಾರುಗಳ ಮೇಲೆ ಬಿದ್ದಿವೆ. ಎರಡು ಕಾರುಗಳು ಸಂಪೂರ್ಣ ಜಖಂ ಆಗಿದ್ದು, ಬಿಬಿಎಂಪಿ ಅರಣ್ಯ ಸಿಬ್ಬಂದಿ ರಾತ್ರಿಯೇ ತೆರವು ಮಾಡಿದ್ದಾರೆ.ಇನ್ನು ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳಲ್ಲಿರುವ ಗುಂಡಿಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದ ವಾಹನ ಸವಾರರು ಪರದಾಟ ನಡೆಸುವಂತಾಗಿದೆ. ಜನರು ಬಿಬಿಎಂಪಿ, ಸರ್ಕಾರದ ಮೇಲೆ ಹಿಡಿಶಾಪ ಹಾಕುತ್ತಿದ್ದಾರೆ.
ಬೆಳ್ಳಂದೂರು ಕ್ರಾಸ್, ಸರ್ಜಾಪುರ ರಸ್ತೆಯ ರೈನ್ಬೋ ಲೇಔಟ್ ಮತ್ತೆ ಜಲಾವೃತಗೊಂಡಿದೆ. ನಿವಾಸಿಗಳು ಜಲದಿಗ್ಬಂಧನದಲ್ಲಿದ್ದಾರೆ. ರೈನ್ ಬೋ ಲೇಔಟ್ನ ಅಪಾರ್ಟ್ಮೆಂಟ್ ಬೇಸ್ಮೆಂಟ್ಗೆ ನೀರು ನುಗ್ಗಿದೆ.ಸರ್ಜಾಪುರ ರಸ್ತೆಯ ವಿಪ್ರೋ ಕಂಪನಿ ಸೇರಿ ಇಡೀ ಏರಿಯಾಗೆ ನೀರು ನುಗ್ಗಿದೆ. ಶಾಂತಿನಗರ, ಹೆಬ್ಬಾಳ ರಸ್ತೆಯಲ್ಲಿ ನೀರು ನಿಂತು ಪರಿಣಾಮ ವಾಹನ ಸವಾರರು ಪರದಾಟ ನಡೆಸುವಂತಾಗಿದೆ.