LATEST NEWS
ಹೆಸರಾಂತ ಯಕ್ಷಗಾನ ಭಾಗವತ ಬಲಿಪ ನಾರಾಯಣ ಭಾಗವತ ಇನ್ನಿಲ್ಲ
ಮಂಗಳೂರು ಫೆಬ್ರವರಿ 16 : ಯಕ್ಷಗಾನ ರಂಗದಲ್ಲಿ ತಮ್ಮ ಭಾಗವತಿಕೆ ಮೂಲಕ ತಮ್ಮದೇ ಛಾಪು ಮೂಡಿಸಿದ್ದ ತೆಂಕುತಿಟ್ಟಿನ ಪ್ರಖ್ಯಾತ ಭಾಗವತ ಬಲಿಪ ನಾರಾಯಣ ಭಾಗವತ ನಿಧನರಾಗಿದ್ದಾರೆ,
ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದಲ್ಲಿ 1938ರ ಮಾರ್ಚ್ 13ರಂದು ಜನಿಸಿದ್ದ ಬಲಿಪ ನಾರಾಯಣ ಭಾಗವತರು ಬಲಿಪ ಮಾಧವ ಭಟ್ ಮತ್ತು ತಾಯಿ ಸರಸ್ವತಿ ದಂಪತಿಯ ಪುತ್ರ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲ್ಲೂಕಿನ ಮಾರೂರು ನೂಯಿಯಲ್ಲಿ ವಾಸವಿದ್ದರು. ತೆಂಕು ತಿಟ್ಟು ಯಕ್ಷ ರಂಗದ ಭೀಷ್ಮ ಎಂದೇ ಖ್ಯಾತವಾಗಿರುವ ಬಲಿಪರು ತೆಂಕುತಿಟ್ಟಿನ ಹಿರಿಯ ಭಾಗವತರು. 13ನೇ ವಯಸ್ಸಿಗೆ ಯಕ್ಷಗಾನ ರಂಗವನ್ನು ಪ್ರವೇಶಿಸಿದ್ದರು. ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ. 60 ವರ್ಷಗಳಿಗೂ ಹೆಚ್ಚು ಕಾಲ ಯಕ್ಷಗಾನ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಯಕ್ಷಗಾನದ ಹಲವಾರು ಪ್ರಸಂಗಗಳನ್ನು ರಚಿಸಿದ್ದಾರೆ. ಯಕ್ಷಗಾನದ ಹಾಡುಗಳ ಅನೇಕ ಕೃತಿಗಳನ್ನೂ ರಚಿಸಿದ್ದಾರೆ. ಯಕ್ಷಗಾನದ ಪ್ರಸಂಗಗಳ ಪದ್ಯಗಳು ಅವರಿಗೆ ಕಂಠಪಾಠವಾಗಿದ್ದವು. ಅನಗತ್ಯ ಆಲಾಪನೆಗಳಿಲ್ಲದೇ, ರಾಗ ವಿಸ್ತಾರ ಮಾಡದೇ ಯಕ್ಷಗಾನ ಪ್ರಸಂಗದ ಛಂದಸ್ಸಯ ಹಾಗೂ ತಾಳಕ್ಕೆ ಪೂರಕವಾಗಿ ಶುದ್ಧ ಯಕ್ಷಗಾನೀಯ ಶೈಲಿಯಲ್ಲಿ ಹಾಡುತ್ತಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಸಾವಿರಾರು ಸನ್ಮಾನಗಳು ಅವರಿಗೆ ಸಂದಿದ್ದವು.