Connect with us

KARNATAKA

‘ಕಿರಿಕ್ ಪಾರ್ಟಿ’ ಚಿತ್ರತಂಡದ ವಿರುದ್ಧ ಜಾಮೀನು ರಹಿತ ವಾರೆಂಟ್

ಬೆಂಗಳೂರು, ಎಪ್ರಿಲ್ 09: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ರಿಷಬ್ ಶೆಟ್ಟಿ ನಿರ್ದೇಶನದ ‘ಕಿರಿಕ್ ಪಾರ್ಟಿ’ ಚಿತ್ರತಂಡಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ. ಸಿನಿಮಾತಂಡದ ವಿರುದ್ಧ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.

ಬೆಂಗಳೂರಿನ 9ನೇ ಎಸಿಎಂಎಂ ಕೋರ್ಟ್ ಜಾಮೀನು ರಹಿತ ವಾರೆಂಟ್ ನೀಡಿದ್ದು, ಬಂಧಿಸಿ ಕರೆತರುವಂತೆ ಕೋರ್ಟ್ ಸೂಚಿಸಿದೆ. ನಟ ರಕ್ಷಿತ್ ಶೆಟ್ಟಿ, ನಿರ್ದೇಶಕ ರಿಷಬ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತು ಪರಮ್ವಾ ಸ್ಟುಡಿಯೋಸ್ ಆರೋಪಿಗಳಾಗಿದ್ದಾರೆ. ಇವರ ವಿರುದ್ಧ ಲಹರಿ ಸಂಸ್ಥೆ ಅನುಮತಿ ಇಲ್ಲದೆ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಹಾಡನ್ನು ಅಕ್ರಮವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ದೂರು ನೀಡಿತ್ತು.

2016ರಲ್ಲಿ ಲಹರಿ ಸಂಸ್ಥೆ ಕಾಪಿ ರೈಟ್ ಆಕ್ಟ್ ಅಡಿ ದೂರು ದಾಖಲು ಮಾಡಿತ್ತು. ದೂರಿನಲ್ಲಿ ಸಿನಿಮಾ ಬಿಡುಗಡೆ ಮಾಡದಂತೆ ಕೋರಲಾಗಿತ್ತು. ಸಿನಿಮಾ ಬಿಡುಗಡೆಯಾಗಿ ಈಗ 5 ವರ್ಷಗಳಾಗಿದೆ. ಆದರೆ ಕೇಸ್ ವಿಚಾರಣೆ ಇನ್ನೂ ಮುಂದುವರೆಯುತ್ತಿದೆ.

ಒಟ್ಟು ತಂಡದ ವಿರುದ್ಧ 8 ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆ. ಆದರೆ ಆರೋಪ ಎದುರಿಸುತ್ತಿರುವವರು ಒಮ್ಮೆಯೂ ಕೋರ್ಟ್ ಗೆ ಹಾಜರಾಗಿಲ್ಲ. ಹಾಗಾಗಿ ಈ ಬಾರಿ ಬಂಧಿಸಿ ಕೋರ್ಟ್ ಮುಂದೆ ಕರೆತರುವಂತೆ ಆದೇಶ ನೀಡಿದ್ದು, ಮೇ 27ಕ್ಕೆ ಕೋರ್ಟ್ ಮುಂದೆ ಹಾಜರು ಪಡಿಸಲು ಪೊಲೀಸರಿಗೆ ಸೂಚನೆ ನೀಡಿದೆ.

ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರವಿಚಂದ್ರನ್ ನಟನೆಯ ಶಾಂತಿ ಕ್ರಾಂತಿ ಚಿತ್ರದ ಮಧ್ಯರಾತ್ರಿಲಿ ಹಾಡನ್ನು ಬಳಸಿಕೊಳ್ಳಲಾಗಿದೆ ಎಂದು ಲಹರಿ ಸಂಸ್ಥೆ ಮುಖ್ಯಸ್ಥ ಲಹರಿ ವೇಲು ದೂರು ದಾಖಲಿದ್ದರು. 2016ರಲ್ಲಿ ಬಂದ ಕಿರಿಕ್ ಪಾರ್ಟಿ ಸೂಪರ್ ಹಿಟ್ ಆಗಿ, ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಮಾಯಿ ಮಾಡಿತ್ತು. ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗ್ಡೆ, ಅರವಿಂದ್ ಅಯ್ಯರ್, ಪ್ರಮೋದ್ ಶೆಟ್ಟಿ, ಚಂದನ್ ಆಚಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.